

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ದಿಮಾಗಿ ನಕ್ಸಲ್’ (ಬೌದ್ಧಿಕ ನಕ್ಸಲೈಟ್) ಹೇಳಿಕೆ ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಗ್ದಾಳಿ ತಾರಕಕ್ಕೇರಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, "ಕಾಂಗ್ರೆಸ್ ಈಗ ಮಾವೋವಾದಿ ಮತ್ತು ನಕ್ಸಲೈಟ್ ಪಕ್ಷವಾಗಿ ಬದಲಾಗುತ್ತಿದೆ" ಎಂದು ಕಿಡಿಕಾರಿದ್ದಾರೆ.
ಆಗಸ್ಟ್ 15 ರಂದು ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ದೇಶದ ಕಾಡುಗಳಲ್ಲಿನ ಸಶಸ್ತ್ರ ನಕ್ಸಲಿಸಂ ಅನ್ನು ಬಹುಮಟ್ಟಿಗೆ ಮಟ್ಟಹಾಕಲಾಗಿದೆ. ಆದರೆ ನಗರ ಪ್ರದೇಶಗಳಲ್ಲಿ 'ದಿಮಾಗಿ ನಕ್ಸಲರು' (Urban Naxals) ಇನ್ನೂ ಸಕ್ರಿಯರಾಗಿದ್ದಾರೆ. ಇಂತಹವರನ್ನು ದೇಶದ ಜನತೆ ಗುರುತಿಸಿ ಪ್ರತ್ಯೇಕಿಸಬೇಕು ಎಂದು ಕರೆ ನೀಡಿದ್ದರು.
ಮೋದಿ ಅವರ ಈ ಹೇಳಿಕೆಗೆ ಪ್ರತಿಪಕ್ಷ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸಂಸದ ಪಿ. ಚಿದಂಬರಂ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ “ನಾನು ದಿಮಾಗಿ ನಕ್ಸಲ್ ಎಂದು ಹೆಮ್ಮೆಪಡುತ್ತೇನೆ” ಎಂದು ವ್ಯಂಗ್ಯವಾಗಿ ಹೇಳಿದ್ದರು.
ಈ ಕುರಿತು ಎಎನ್‌ಐ ಮೂಲಕ ಪ್ರತಿಕ್ರಿಯಿಸಿರುವ ಕಿರಣ್ ರಿಜಿಜು ಅವರು, ಪ್ರಧಾನಿ ಮೋದಿ ಅವರ ಹೇಳಿಕೆ ಯಾವುದೇ ನಿರ್ದಿಷ್ಟ ಪ್ರತಿಪಕ್ಷದ ವಿರುದ್ಧವಾಗಿರಲಿಲ್ಲ. ಆದರೆ, ಕಾಂಗ್ರೆಸ್ ನಾಯಕರು ಆ ಹೇಳಿಕೆ ತಮ್ಮನ್ನೇ ಗುರಿಯಾಗಿಸಿಕೊಂಡಿದೆ ಎಂದು ಭಾವಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದ ರಾಷ್ಟ್ರೀಯ ಸಲಹಾ ಮಂಡಳಿಯು ಇಂತಹ ವಿಚಾರಧಾರೆ ಹೊಂದಿದ್ದವರ ಪ್ರಭಾವಕ್ಕೆ ಒಳಗಾಗಿತ್ತು. ಕಾಂಗ್ರೆಸ್ ಈಗ ಮಾವೋವಾದದತ್ತ ಸಾಗುತ್ತಿರುವಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.
ವೈಚಾರಿಕ ನಕ್ಸಲಿಸಂನಲ್ಲಿ ಪ್ರತ್ಯೇಕತಾವಾದಿ ಪ್ರವೃತ್ತಿಗಳು, 370ನೇ ವಿಧಿಯನ್ನು ಮರುಸ್ಥಾಪಿಸುವಂತಹ ಬೇಡಿಕೆಗಳು ಅಥವಾ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಪ್ರತ್ಯೇಕಿಸುವ ಬೇಡಿಕೆಗಳಿಗೆ ಬೆಂಬಲ ನೀಡುವಂತಹ ನಿಲುವುಗಳೂ ಸೇರಿವೆ.
ಕಾಂಗ್ರೆಸ್ ಪಕ್ಷ ತನ್ನನ್ನು ತಾನೇ ಮಾವೋವಾದಿ ಮತ್ತು ನಕ್ಸಲೈಟ್ ಘಟಕವಾಗಿ ಪರಿವರ್ತಿಸಿಕೊಂಡಿದೆ. ಕಾಂಗ್ರೆಸ್ ಈಗಾಗಲೇ “ಮುಸ್ಲಿಂ ಲೀಗ್‌ಗೆ ಸಮಾನವಾಗಿದೆ”, ಇದೀಗ ಮಾವೋವಾದಿ ಪಕ್ಷವಾಗುವತ್ತ ಸಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಅವರ ಹೇಳಿಕೆಯು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಕ್ಸಲಿಸಂ ಕುರಿತು ನೀಡಿದ್ದ ಅಭಿಪ್ರಾಯವನ್ನೇ ಪ್ರತಿಧ್ವನಿಸುತ್ತದೆ ಎಂದು ಹೇಳಿದರು.
2006ರಲ್ಲಿ ಮನಮೋಹನ್ ಸಿಂಗ್ ಅವರು ನಕ್ಸಲಿಸಂ ಅನ್ನು ಭಾರತದ “ಆಂತರಿಕ ಭದ್ರತೆಗೆ ಏಕೈಕ ಅತಿದೊಡ್ಡ ಸವಾಲು” ಎಂದು ಹೇಳಿದ್ದನ್ನು ರಿಜಿಜು ಉಲ್ಲೇಖಿಸಿದರು.
ಮೋದಿ ಅವರ ಹೇಳಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಮನಮೋಹನ್ ಸಿಂಗ್ ಅವರ ಕುಟುಂಬದ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ನಕ್ಸಲರೊಂದಿಗಿನ ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟ ಭದ್ರತಾ ಸಿಬ್ಬಂದಿಯ ಬಗ್ಗೆ ತಾವು ಉಲ್ಲೇಖಿಸುತ್ತಿರುವ ‘ದಿಮಾಗಿ ನಕ್ಸಲರು’ ಯಾವುದೇ ಸಹಾನುಭೂತಿ ಹೊಂದಿಲ್ಲ. ಬದಲಿಗೆ ಭದ್ರತಾ ಸಿಬ್ಬಂದಿಯ ಸಾವನ್ನು ಸಂಭ್ರಮಿಸಿದರು ಎಂದು ಆರೋಪಿಸಿದರು.
ಆದರೆ, ಕಾಂಗ್ರೆಸ್ ಹಾಗೂ ಪಿ. ಚಿದಂಬರಂ ಅವರು ‘ದಿಮಾಗಿ ನಕ್ಸಲ್’ ಎಂಬ ಪದವನ್ನು ರಾಜಕೀಯ ಅವಮಾನಕಾರಿ ಹೇಳಿಕೆ ಎಂದು ತಿರಸ್ಕರಿಸಿದ್ದಾರೆ.
ಬಿಜೆಪಿಯು ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಈ ರೀತಿಯ ಹೊಸ ಪದ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಹಿಂದೆ ‘ಅರ್ಬನ್ ನಕ್ಸಲ್’, ‘ಟುಕಡೆ-ಟುಕಡೆ ಗ್ಯಾಂಗ್’ ಸೇರಿದಂತೆ ಇದೇ ರೀತಿಯ ಪದಗಳನ್ನು ಬಿಜೆಪಿ ಬಳಸಿತ್ತು ಎಂದು ಕಾಂಗ್ರೆಸ್ ನಾಯಕರು ವಾದಿಸಿದ್ದಾರೆ.