

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ 68.53 ಲಕ್ಷ ರೂ. ಮೌಲ್ಯದ ಹಣವನ್ನು ಕೊಂಡೊಯ್ಯುತ್ತಿದ್ದ ಇಬ್ಬರು ಭಾರತೀಯ ಪ್ರಯಾಣಿಕರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಬುಧವಾರ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಪ್ರದೇಶದಲ್ಲಿ ಪ್ರಯಾಣಿಕರ ನಡವಳಿಕೆಯನ್ನು ಗಮನಿಸುತ್ತಿದ್ದಾಗ ಸ್ಕ್ಯಾನರ್ (Random X-BIS) ಬಳಿ ನಿಯೋಜಿಸಲಾಗಿದ್ದ ಸಿಬ್ಬಂದಿಯೊಬ್ಬರು ಒಬ್ಬ ಪ್ರಯಾಣಿಕ ಗಮನಿಸಿದ್ದಾರೆ. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅವರೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನೂ ಗುರುತಿಸಲಾಯಿತು.
ಮೊದಲ ಪ್ರಯಾಣಿಕನ ಬಳಿ 29,39,000 ರೂ ಮತ್ತು ಎರಡನೇ ಪ್ರಯಾಣಿಕನ ಬಳಿ 39,14,500 ರೂ ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಇಬ್ಬರೂ ಪ್ರಯಾಣಿಕರು ಇಂಡಿಗೋ ವಿಮಾನ 6E-2203 ರಲ್ಲಿ ಗುವಾಹಟಿಗೆ ಪ್ರಯಾಣಿಸಿ, ಅಲ್ಲಿಂದ ಅಗರ್ತಲಾಗೆ ತೆರಳುವ ಯೋಜನೆ ಹಾಕಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ ಇಬ್ಬರು ಪ್ರಯಾಣಿಕರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿರುವ ಆದಾಯ ತೆರಿಗೆ ಇಲಾಖೆಯ 'ಏರ್ ಇಂಟೆಲಿಜೆನ್ಸ್ ಯೂನಿಟ್'ಗೆ (AIU) ಹಸ್ತಾಂತರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.