ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಅಗ್ನಿಶಾಮಕ ದಳ ಪ್ರಕಾರ, ಬೆಂಕಿ ಅವಘಡದಲ್ಲಿ ಮೃತಪಟ್ಟ ಒಂಬತ್ತು ಮಂದಿಯೂ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಬಂದಿದ್ದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Fire at a hotel in Kolkata
ಕೋಲ್ಕತ್ತಾದ ಹೊಟೇಲ್ ನಲ್ಲಿ ಬೆಂಕಿ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಬುಧವಾರ ಮುಂಜಾನೆ ಹೊಟೇಲ್ ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಗುವೂ ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ನಸುಕಿನ ಜಾವ ಸುಮಾರು 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಹೊಟೇಲ್ ನಲ್ಲಿದ್ದ ಹಲವು ಅತಿಥಿಗಳು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಕೂಡಲೇ ಭಾರಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.

ಅಗ್ನಿಶಾಮಕ ದಳ ಪ್ರಕಾರ, ಬೆಂಕಿ ಅವಘಡದಲ್ಲಿ ಮೃತಪಟ್ಟ ಒಂಬತ್ತು ಮಂದಿಯೂ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಬಂದಿದ್ದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Fire at a hotel in Kolkata
ಬೆಂಗಳೂರು: ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ; ದುಬಾರಿ ಬೆಲೆಯ ಕಾರುಗಳು ಸೇರಿ 25ಕ್ಕೂ ಹೆಚ್ಚು ವಾಹನ ಸುಟ್ಟು ಭಸ್ಮ!

ಹವಾನಿಯಂತ್ರಣ (AC) ಘಟಕ ಸ್ಫೋಟಗೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ, ಬೆಂಕಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.

ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ನ್ಯೂ ಮಾರ್ಕೆಟ್ ಸಮೀಪದ ಫ್ರೀ ಸ್ಕೂಲ್ ಸ್ಟ್ರೀಟ್‌ನಲ್ಲಿರುವ ಹೊಟೇಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಲಭ್ಯವಾದ ತಕ್ಷಣ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ವಿಪತ್ತು ನಿರ್ವಹಣಾ ತಂಡವೂ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿತು.

ಕಟ್ಟಡದೊಳಗೆ ಸಿಲುಕಿದ್ದವರನ್ನು ಹೊರಗೆ ಕರೆತರಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ದಟ್ಟವಾದ ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿಗೆ ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗಳಿಗೆ ತೆರಳುವುದು ಕಷ್ಟವಾಯಿತು. ಒಂಬತ್ತು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸಿಲುಕಿರುವವರನ್ನು ರಕ್ಷಿಸುವುದು ಮತ್ತು ಬೆಂಕಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚುವುದು ನಮ್ಮ ಆದ್ಯತೆಯಾಗಿದೆ. ಬೆಂಕಿಯನ್ನು ನಂದಿಸಲಾಗಿದ್ದು, ಸದ್ಯ ತಂಪುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕೋಲ್ಕತ್ತಾದ ಹೋಟೆಲ್‌ನಲ್ಲಿ ಸಂಭವಿಸಿದ ಈ ಅಗ್ನಿ ಅವಘಡಕ್ಕೆ ಕೇವಲ ಎರಡು ದಿನಗಳ ಮುನ್ನವೇ ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯಲ್ಲಿ ಮತ್ತೊಂದು ಹೊಟೇಲ್ ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿತ್ತು. ಆಗಸ್ಟ್ 17ರಂದು ಮುಂಜಾನೆ ತಾರಾಪೀಠದ ಹೋಟೆಲ್ ಬಿಡೇಶಿನಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.

ಐದು ಅಂತಸ್ತಿನ ಹೋಟೆಲ್‌ನ ನೆಲ ಮಹಡಿಯಲ್ಲಿ ನಸುಕಿನ ಜಾವ ಸುಮಾರು 4.30ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ಆ ವೇಳೆ ಬಹುತೇಕ ಅತಿಥಿಗಳು ನಿದ್ರಿಸುತ್ತಿದ್ದರು. ತಾರಾಪೀಠ ದೇವಾಲಯದ ಸಮೀಪದ ಪವಿತ್ರ ಕೊಳದ ಪಕ್ಕದಲ್ಲೇ ಈ ಹೊಟೇಲ್ ಇದೆ.

ಮೇಘಾಲಯದ ಒಂದೇ ಕುಟುಂಬದ ಐವರು, ಇಬ್ಬರು ಮಕ್ಕಳು ಸೇರಿದಂತೆ, ಈ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದರು. ಕುಟುಂಬವು ಹೊಟೇಲ್ ನ ಮೇಲಿನ ಮಹಡಿಯಲ್ಲಿ ತಂಗಿತ್ತು. ಬೆಂಕಿ ಕಾಣಿಸಿಕೊಂಡಿರುವುದು ತಿಳಿದ ತಕ್ಷಣ ಮಕ್ಕಳೊಂದಿಗೆ ಒಟ್ಟಾಗಿ ಹೊರಬರಲು ಯತ್ನಿಸಿದಾಗ, ಕೆಳಗೆ ಇಳಿಯುವ ಸಂದರ್ಭದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡಿದ್ದರು.

ಗಾಯಗೊಂಡವರನ್ನು ರಕ್ಷಿಸಿ ಚಿಕಿತ್ಸೆಗಾಗಿ ರಾಮ್‌ಪುರಹಾಟ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com