

ನವದೆಹಲಿ: ಗ್ರಾಮೀಣ ಭಾಗದ ಶಾಲೆಗಳ ಮೂಲಸೌಕರ್ಯ ಸುಧಾರಿಸಲು ಮತ್ತು 1,000ಕ್ಕೂ ಹೆಚ್ಚು ಹೊಸ ಅತ್ಯಾಧುನಿಕ ಶಾಲೆಗಳನ್ನು ನಿರ್ಮಿಸಲು 'ಪಿಎಂ ಕೇರ್ಸ್ ಫಂಡ್' ಅನ್ನು ಬಳಸಬಹುದು ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಬುಧವಾರ ಹೇಳಿದ್ದಾರೆ.
ಗ್ರಾಮೀಣ ಭಾಗದ ಶಾಲೆಗಳ ಮೂಲಸೌಕರ್ಯದಲ್ಲಿನ ಕೊರತೆಗಳನ್ನು ಎತ್ತಿ ತೋರಿಸಲು 'ಸ್ಕೂಲ್ ಥಿಕ್ ಕರೋ' ಅಭಿಯಾನ ಕೈಗೊಂಡಿರುವ ಸಿಜೆಪಿಯ ರಾಷ್ಟ್ರೀಯ ಸಂಚಾಲಕ, ದೇಶದ ಮಕ್ಕಳು ತಮ್ಮ ಶಾಲೆಗಳಿಗೆ ಉತ್ತಮ ರಸ್ತೆಗಳು ಹಾಗೂ ಶಾಲೆಯೊಳಗೆ ಕುಳಿತುಕೊಳ್ಳಲು ಬೆಂಚುಗಳು ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪರಿತಪಿಸುತ್ತಿದ್ದಾರೆ ಎಂದಿದ್ದಾರೆ.
'ಎಕ್ಸ್'ನಲ್ಲಿ ಹಂಚಿಕೊಂಡಿರುವ ವಿಡಿಯೋ ಹೇಳಿಕೆಯೊಂದರಲ್ಲಿ ದೀಪ್ಕೆ, 'ಒಂದೆಡೆ ₹8,500 ಕೋಟಿ ಬಳಕೆಯಾಗದೆ ಉಳಿದುಕೊಂಡಿದ್ದರೆ, ಇನ್ನೊಂದೆಡೆ ಈ ದೇಶದ ಮಕ್ಕಳು ಶಾಲೆಗೆ ಹೋಗಲು ಉತ್ತಮ ರಸ್ತೆ, ಶಾಲೆಯಲ್ಲಿ ಕುಳಿತುಕೊಳ್ಳಲು ಉತ್ತಮ ಬೆಂಚುಗಳು ಮತ್ತು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ' ಎಂದಿದ್ದಾರೆ.
'ಹಾಗಾದರೆ, ಈ ಮಕ್ಕಳ ಶಾಲೆಗಳಿಗಾಗಿ ನಾವು ಈ ಹಣವನ್ನು ಏಕೆ ಬಳಸುತ್ತಿಲ್ಲ? ಹೊಸ ಶಾಲೆಗಳನ್ನು ನಿರ್ಮಿಸಲು ಈ ಹಣವನ್ನು ಏಕೆ ವಿನಿಯೋಗಿಸುತ್ತಿಲ್ಲ? ಒಂದು ಉತ್ತಮ ಹಾಗೂ ಸಕಲ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆ ನಿರ್ಮಾಣಕ್ಕೆ ಸುಮಾರು ₹8 ಕೋಟಿ ವೆಚ್ಚವಾಗುತ್ತದೆ ಎಂದು ಭಾವಿಸೋಣ. ಹೀಗಿರುವಾಗ, ಒಂದು ಶಾಲೆಗೆ ₹8 ಕೋಟಿ ವೆಚ್ಚವಾದರೆ, ₹8,500 ಕೋಟಿಯಲ್ಲಿ 1,000ಕ್ಕೂ ಹೆಚ್ಚು ಹೊಸ ಅತ್ಯಾಧುನಿಕ ಮಾದರಿ ಶಾಲೆಗಳನ್ನು ನಿರ್ಮಿಸಬಹುದು. ಆದರೆ ಹೀಗೆ ಆಗುತ್ತಿಲ್ಲ' ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳಿಗೆ ಇತ್ತೀಚೆಗೆ ಭೇಟಿ ನೀಡಿದಾಗ, ಅಲ್ಲಿನ ಸ್ಥಿತಿ 'ಅತ್ಯಂತ ಕೆಟ್ಟದಾಗಿದೆ'. ಇಲ್ಲಿ ಮೂಲಭೂತ ಸೌಕರ್ಯಗಳು ಏಕಿಲ್ಲ ಎಂದು ನಾನು ಅಧಿಕಾರಿಗಳನ್ನು ಕೇಳಿದಾಗ, ನಿಧಿಯ ಕೊರತೆಯಿದೆ ಎಂದು ನನಗೆ ತಿಳಿಸಲಾಯಿತು' ಎಂದು ಅವರು ಹೇಳಿದರು.
'ಒಂದೆಡೆ ಹಣವಿಲ್ಲ ಎಂದು ಹೇಳಲಾಗುತ್ತಿದೆ, ಆದರೆ ಇನ್ನೊಂದೆಡೆ 'ಪಿಎಂ ಕೇರ್ಸ್' ನಿಧಿಯಲ್ಲಿ ₹8,500 ಕೋಟಿ ಹಾಗೆಯೇ ಉಳಿದಿವೆ. ಹಾಗಾದರೆ, ಈ ಹಣವನ್ನು ಶಾಲೆಗಳಿಗಾಗಿ ಬಳಸಬಾರದೇ?' ಎಂದು ಪ್ರಶ್ನಿಸಿದ ಅವರು, ಈ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಬಳಸುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸುವಂತೆ ಜನರಿಗೆ ಕರೆ ನೀಡಿದರು.
''ಪಿಎಂ ಕೇರ್ಸ್' ನಿಧಿಯನ್ನು ಜನರಿಗಾಗಿ, ಶಿಕ್ಷಣಕ್ಕಾಗಿ ಮತ್ತು ಬಡ ಮಕ್ಕಳ ಶಾಲೆಗಳಿಗಾಗಿ ಬಳಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡುತ್ತೇನೆ. ತಾವು ನಿಜವಾಗಿಯೂ ಕಾಳಜಿ ವಹಿಸುತ್ತೇವೆ ಎಂಬುದನ್ನು ಪ್ರಧಾನಿ ಮೋದಿಯವರು ಈ ಮೂಲಕ ತೋರಿಸಬೇಕು' ಎಂದು ಅವರು ಹೇಳಿದರು.
'ಎಕ್ಸ್'ನಲ್ಲಿನ ಮತ್ತೊಂದು ಪೋಸ್ಟ್‌ನಲ್ಲಿ, ಸಿಜೆಪಿ ಸಂಸ್ಥಾಪಕರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ಕೊಳಕು ಶೌಚಾಲಯದ್ದು ಮತ್ತು ಇನ್ನೊಂದು ಶಿಥಿಲಗೊಂಡ ಶಾಲಾ ಕಟ್ಟಡದ್ದು. 'ಪಿಎಂ ಕೇರ್ಸ್ ನಿಧಿಯನ್ನು ಸದುಪಯೋಗಪಡಿಸಿಕೊಳ್ಳಬಹುದು' ಎಂದು ಬರೆದಿದ್ದಾರೆ.
ಇತ್ತೀಚಿನ ಲೆಕ್ಕಪರಿಶೋಧನಾ ವರದಿ ಪ್ರಕಾರ, 'ಪ್ರಧಾನ ಮಂತ್ರಿಯವರ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ'ಯ (PM CARES Fund) ಒಟ್ಟು ಮೊತ್ತವು 2025ರ ಮಾರ್ಚ್ 31ರ ವೇಳೆಗೆ ₹8,452 ಕೋಟಿಗೆ ತಲುಪಿದೆ; ಒಂದು ವರ್ಷದ ಹಿಂದೆ ಇದು ₹7,173 ಕೋಟಿಯಷ್ಟಿತ್ತು. ಪಿಎಂ ಕೇರ್ಸ್ ನಿಧಿಯ ಒಟ್ಟು ₹8,452 ಕೋಟಿ ಪೈಕಿ 7,846 ಕೋಟಿ ರೂಪಾಯಿಗಳನ್ನು ಸ್ಥಿರ ಠೇವಣಿಗಳಲ್ಲಿ ಮತ್ತು 605 ಕೋಟಿ ರೂಪಾಯಿಗಳನ್ನು ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ಇರಿಸಲಾಗಿದೆ.
ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಬೆಂಬಲ ನೀಡುವ ಉದ್ದೇಶವನ್ನು ಹೊಂದಿರುವ 'ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್' ಯೋಜನೆಗಾಗಿ ಈ ನಿಧಿಯು 87.8 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದೆ; ಹಿಂದಿನ ವರ್ಷದಲ್ಲಿ ಈ ವೆಚ್ಚವು ₹15.37 ಕೋಟಿ ರೂಪಾಯಿಗಳಷ್ಟಿತ್ತು ಎಂಬುದನ್ನು ಗಮನಿಸಿದರೆ, ಸದ್ಯದ ವೆಚ್ಚದಲ್ಲಿ ಭಾರಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ (2020ರ ಮಾರ್ಚ್ 27) ಕೇಂದ್ರ ಸರ್ಕಾರ ಪಿಎಂ-ಕೇರ್ಸ್ ನಿಧಿ ಸ್ಥಾಪಿಸಿತು. ಪಿಎಂ ಕೇರ್ಸ್ ನಿಧಿಗೆ ಪ್ರಧಾನಿ ಅಧ್ಯಕ್ಷತೆ ಇದ್ದರೆ, ಸಚಿವ ಸಂಪುಟದ ಹಿರಿಯ ಸಚಿವರು ಟ್ರಸ್ಟಿಗಳಾಗಿದ್ದಾರೆ. ಪ್ರಧಾನಿ ಕಾರ್ಯಾಲಯವೇ ಈ ನಿಧಿಯನ್ನು ನಿರ್ವಹಿಸುತ್ತದೆ.