'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ಸದ್ಯ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಹಾಗೂ ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಅನೇಕ ಶಾಸಕರಿದ್ದಾರೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
C Joseph Vijay
ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ರಾಜ್ಯದ ಶಾಸಕರಿಗೆ ಭರ್ಜರಿ ಕೊಡುಗೆಯನ್ನು ಘೋಷಿಸಿದ್ದಾರೆ. ರಾಜ್ಯದ ಎಲ್ಲ 234 ಶಾಸಕರಿಗೆ ತಮ್ಮ ಕ್ಷೇತ್ರಗಳಲ್ಲಿನ ಸಾರ್ವಜನಿಕ ಕುಂದುಕೊರತೆಗಳನ್ನು ಬಗೆಹರಿಸಲು ಅನುಕೂಲವಾಗುವಂತೆ ಕಾರು ಹಾಗೂ ಇಂಧನ ಮತ್ತು ನಿರ್ವಹಣಾ ವೆಚ್ಚಕ್ಕಾಗಿ ಭತ್ಯೆ ಸಿಗಲಿದೆ ಎಂದಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಘೋಷಣೆ ಮಾಡಿದ ಅವರು, ಶಾಸಕರಿಗೆ ವಾಹನ ಮತ್ತು ಭತ್ಯೆಯನ್ನು ಒಳಗೊಂಡಿರುವ ಹೊಸ ನೆರವಿನ ಕ್ರಮಗಳು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಹಾಗೂ ಸರ್ಕಾರಿ ಯೋಜನೆಗಳ ಮೇಲ್ವಿಚಾರಣೆ ಮಾಡಲು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸುವಾಗ ಇತರರನ್ನು ಅವಲಂಬಿಸದೆ ಕಾರ್ಯನಿರ್ವಹಿಸಲು ಅವರಿಗೆ ಸಹಕಾರಿಯಾಗಲಿವೆ ಎಂದು ಹೇಳಿದರು.

ಸದ್ಯ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಹಾಗೂ ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಅನೇಕ ಶಾಸಕರಿದ್ದಾರೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಜನಪ್ರತಿನಿಧಿಗಳಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಕಾರಿನ ಅಗತ್ಯವಿದೆ ಎಂದು ವಿಜಯ್ ಹೇಳಿದರು.

ಅಗತ್ಯವಿರುವ ಸಾರಿಗೆ ಹಾಗೂ ಇತರ ವ್ಯವಸ್ಥಾಪಕ ಬೆಂಬಲವಿಲ್ಲದೆ ಶಾಸಕರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ತಮಗೆ ಕಾರುಗಳನ್ನು ಒದಗಿಸುವಂತೆ ವಿಸಿಕೆ (VCK) ಶಾಸಕ ಜೋತಿಮಣಿ ಹೇಳಿದ ನಂತರ ಈ ಘೋಷಣೆ ಹೊರಬಿದ್ದಿದೆ.

ಚಾಲಕ, ಇಂಧನ ಮತ್ತು ಕಾರುಗಳ ನಿರ್ವಹಣಾ ವೆಚ್ಚಗಳಿಗಾಗಿ ಶಾಸಕರಿಗೆ ತಿಂಗಳಿಗೆ ₹75,000 ಭತ್ಯೆಯನ್ನು ನೀಡಲಾಗುವುದೆಂದು ವಿಜಯ್ ಸರ್ಕಾರ ಘೋಷಿಸಿದೆ. ಜೊತೆಗೆ, ಶಾಸಕರು ಈಗ ತಮ್ಮ ಅಧಿಕೃತ ಕೆಲಸಗಳಿಗಾಗಿ ಕಾರ್ಯದರ್ಶಿಯೊಬ್ಬರನ್ನು ನೇಮಿಸಿಕೊಳ್ಳಲು ₹25,000 ರಾಜ್ಯ ಅನುದಾನವನ್ನೂ ಪಡೆಯಲಿದ್ದಾರೆ.

C Joseph Vijay
'ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ': TVK ಸಚಿವ ಮಾಡಿದ ಎಡವಟ್ಟಿನಿಂದ ಇಕ್ಕಟ್ಟಿಗೆ ಸಿಲುಕಿದ ಸಿಎಂ ವಿಜಯ್!

ಮುಖ್ಯಮಂತ್ರಿಯವರ ಈ ಘೋಷಣೆಯನ್ನು ಶಾಸಕರು ತಕ್ಷಣವೇ ಸ್ವಾಗತಿಸಿದರು.

ಮುಖ್ಯಮಂತ್ರಿಗೆ ಧನ್ಯವಾದ ಅರ್ಪಿಸಲು ಟಿವಿಕೆ ಶಾಸಕಿ ಸಿಂಧು ಅವರು ವಿಧಾನಸಭೆಯಲ್ಲಿ ಎಂಜಿಆರ್ ಅವರ 'ಕೊಡುತ್ತದೆಲ್ಲಂ ಕೊಡುತ್ತಾನ್' (Kodutthathellam Kodutthan) ಹಾಡನ್ನು ಹಾಡಿದರು; ಈ ವೇಳೆ ಮುಖ್ಯಮಂತ್ರಿ ನಗುತ್ತಿದ್ದರೆ, ಇತರ ಶಾಸಕರು ತಮ್ಮ ಮೇಜುಗಳನ್ನು ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ಟಿವಿಕೆ ಮೈತ್ರಿಪಕ್ಷವಾದ ಕಾಂಗ್ರೆಸ್‌ ಶಾಸಕಿ ತಾರಗೈ ಕಥ್‌ಬರ್ಟ್ ಈ ಘೋಷಣೆಯನ್ನು ಸ್ವಾಗತಿಸಿದ್ದು, ಇದು ಶಾಸಕರನ್ನು 'ಅತ್ಯಂತ ಸಂತೋಷಪಡಿಸಿದೆ'. ವಿರೋಧ ಪಕ್ಷದ ಶಾಸಕರು ಇದನ್ನು ಬಹಿರಂಗವಾಗಿ ಹೇಳದೇ ಇರಬಹುದಾದರೂ, ಅವರೂ ಸಹ ಈ ನಿರ್ಧಾರವನ್ನು ಸ್ವಾಗತಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ ಅವರು ಈ ಕ್ರಮದ ವ್ಯಾಪಕ ಪ್ರಯೋಜನಗಳನ್ನು ಎತ್ತಿ ತೋರಿಸುವ ಮೂಲಕ ಅದನ್ನು ಬೆಂಬಲಿಸಿದರು. ಶಾಸಕರಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಹಾಯ ಮಾಡುವುದರ ಜೊತೆಗೆ, ಈ ನಿರ್ಧಾರವು ಚಾಲಕರು ಮತ್ತು ಕಾರ್ಯದರ್ಶಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದರು.

ಆದರೆ, ವಿರೋಧ ಪಕ್ಷ ಡಿಎಂಕೆ, ವಿಜಯ್ ಅವರ ಸರ್ಕಾರವು ಮಾಡಿರುವ ಈ ಘೋಷಣೆಯನ್ನು 'ಅನಗತ್ಯ ವೆಚ್ಚ' ಎಂದು ಟೀಕಿಸಿದೆ. ಈ ನಿರ್ಧಾರಕ್ಕೆ ಭಾರಿ ಮೊತ್ತದ ಹಣದ ಅಗತ್ಯವಿರುತ್ತದೆ. ಎಲ್ಲ 234 ಶಾಸಕರಿಗೆ ಕಾರುಗಳನ್ನು ಒದಗಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ, ಜೊತೆಗೆ ಹೆಚ್ಚುವರಿ ಭತ್ಯೆಗಳನ್ನೂ ಘೋಷಿಸಲಾಗಿದೆ. ಇದರ ಅಗತ್ಯವೇನಿತ್ತು? ಎಂದು ಡಿಎಂಕೆ ವಕ್ತಾರ ಎ. ಶರವಣನ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com