

ಚೆನ್ನೈ: ಕಾವೇರಿ ಜಲ ವಿವಾದದ ಕುರಿತು ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯ ನಡುವೆ, ತಮಿಳುನಾಡು ಜಲಸಂಪನ್ಮೂಲ ಸಚಿವ ಎನ್ ಆನಂದ್ ಬುಧವಾರ ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆಗೆ ತಮ್ಮ ಸರ್ಕಾರದ ವಿರೋಧವನ್ನು ಪುನರುಚ್ಚರಿಸಿದ್ದಾರೆ ಮತ್ತು ಕರ್ನಾಟಕ ಒಂದೇ ಒಂದು ಕಲ್ಲು ಇಡೋಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಆನಂದ್, ಟಿವಿಕೆ ಸರ್ಕಾರ ಕಾವೇರಿ ವಿಷಯದಲ್ಲಿ "ಮೃದು ಧೋರಣೆ" ಅನುಸರಿಸುತ್ತಿದೆ ಎಂಬ ಡಿಎಂಕೆ ಶಾಸಕ ದುರೈ ಚಂದ್ರಶೇಖರನ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.
"ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ, ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ನಾವು ಬಿಡುವುದಿಲ್ಲ" ಎಂದು ಆನಂದ್ ವಿಧಾನಸಭೆಯಲ್ಲಿ ಹೇಳಿದರು.
ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರವು ಮಾತುಕತೆ ಮತ್ತು ಕಾನೂನು ಹೋರಾಟ ಎರಡೂ ಮಾರ್ಗಗಳ ಮೂಲಕ ಈ ವಿಷಯವನ್ನು ಸಕ್ರಿಯವಾಗಿ ನಿಭಾಯಿಸುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದ ದಶಕಗಳಷ್ಟು ಹಳೆಯದು. ಅದರಲ್ಲೂ ಮಳೆ ಕೊರತೆಯಾದ ವರ್ಷಗಳಲ್ಲಿ ಕಾವೇರಿ ನೀರನ್ನು ಹೇಗೆ ಹಂಚಿಕೊಳ್ಳಬೇಕು ಎನ್ನುವುದೇ ಈ ಸಂಘರ್ಷದ ಮೂಲ.
ಕರ್ನಾಟಕ ಪ್ರಸ್ತಾಪಿಸಿರುವ ಮೇಕೆದಾಟು ಬ್ಯಾಲೆನ್ಸಿಂಗ್ ರಿಸರ್ವಾಯರ್ ಯೋಜನೆಯಿಂದ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ಯೋಜನೆಯಿಂದ ತಮಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ತಮಿಳುನಾಡು ಮೊದಲಿನಿಂದಲೂ ಇದನ್ನು ವಿರೋಧಿಸುತ್ತಲೇ ಬಂದಿದೆ. ಇದು ಎರಡೂ ರಾಜ್ಯಗಳ ನಡುವೆ ದೊಡ್ಡ ಮಟ್ಟದ ತಿಕ್ಕಾಟಕ್ಕೆ ಕಾರಣವಾಗಿದೆ.
ಆಗಸ್ಟ್ 7 ರಂದು ವಿಧಾನಸಭೆಯಲ್ಲಿ ಮೇಕೆದಾಟು ಅಣೆಕಟ್ಟು ವಿವಾದದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. 'ಕರ್ನಾಟಕದಂತೆ ತಮಿಳುನಾಡಿನ ಎಲ್ಲಾ ಪಕ್ಷಗಳು ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು' ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ವಿಜಯ್, ಮೇಕೆದಾಟು ಮತ್ತು ಕಾವೇರಿ ವಿವಾದದ ಬಗ್ಗೆ ಸರ್ವಪಕ್ಷ ಸಭೆಯ ಅಗತ್ಯವಿಲ್ಲ ಎಂದು ಹೇಳಿದರು. ವಿರೋಧ ಪಕ್ಷಗಳು 'ರಾಜಕೀಯ ಮಾಡಬಾರದು' ಎಂದು ಅವರು ಒತ್ತಾಯಿಸಿದರು. 'ಕಾವೇರಿ ನೀರಿನ ಹಕ್ಕಿನ ವಿಷಯದಲ್ಲಿ ಟಿವಿಕೆ ನೇತೃತ್ವದ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ' ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿ ಭರವಸೆ ನೀಡಿದರು.