

ತ್ರಿಶೂರ್: ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಯುವಜನರು ನಡೆಸಿದ ಪ್ರತಿಭಟನೆಗಳ ನಂತರ ದೇಶದಲ್ಲಿನ "ಫ್ಯಾಸಿಸ್ಟ್ ಆಳ್ವಿಕೆ" ಅಂತ್ಯದ ಹಂತವನ್ನು ತಲುಪಿದೆ ಎಂದು ನಟ ಪ್ರಕಾಶ್ ರಾಜ್ ಗುರುವಾರ ಹೇಳಿದ್ದಾರೆ. ಅಲ್ಲದೆ, ಅಂತಹ ಶಕ್ತಿಯು ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವಂತೆ ಅವರು ಯುವಜನರಿಗೆ ಕರೆ ನೀಡಿದ್ದಾರೆ.
ಇಲ್ಲಿ ನಡೆದ 'ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ' (DYFI) ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ರಾಜ್, ಕಾಡಿನಲ್ಲಿ ಪ್ರಾಣಿಗಳು ಪರಸ್ಪರ ಸಂವಹನ ನಡೆಸುವ ವಿಧಾನವನ್ನು ಉದಾಹರಣೆಯಾಗಿ ನೀಡಿದರು. ಯುವಜನರು ಈಗ "ಬೇಟೆಗಾರ"ನನ್ನು (predator) ಗುರುತಿಸಿದ್ದಾರೆ. ಈ ದೇಶದ ಯುವಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ, 'ಈಗ ನಮಗೆ ನಿಮ್ಮ ಬಗ್ಗೆ ಮತ್ತು ನಿಮ್ಮ ಪತ್ರಿಕೆ ಸೋರಿಕೆಯ ಕೃತ್ಯಗಳ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಅವರು ಮೋದಿಯವರ ಅಹಂಕಾರಕ್ಕೆ ಪೆಟ್ಟು ನೀಡಿದ್ದಾರೆ ಎಂದು ಹೇಳಿದರು.
ನಾವು ಯಾವುದಕ್ಕೂ ಹೆದರುವುದಿಲ್ಲ ಮತ್ತು ಸರ್ಕಾರದ "ರಾಜಕೀಯ" ತಂತ್ರಗಳು ನಮಗೆ ತಿಳಿದಿವೆ ಎಂದು ಯುವಜನರು ಸರ್ಕಾರಕ್ಕೆ ತಿಳಿಸಿದ್ದಾರೆ. ಮೊದಲ ಬಾರಿಗೆ ನಾಗರಿಕರು ಮತ್ತು ಯುವಜನರು, 'ನಾವು ನಿಮಗೆ ಹೆದರುವುದಿಲ್ಲ' ಎಂದು ಹೇಳಿದ್ದಾರೆ. ಇದನ್ನು ಹೇಳುವ ಯಾರಾದರೂ ನಮಗೆ ಅಗತ್ಯವಿತ್ತು. ರೈತರು, ಕಾರ್ಮಿಕರು ಮತ್ತು ಸರ್ಕಾರಿ ನೌಕರರು ಸೇರಿದಂತೆ ಹಲವು ವರ್ಗಗಳು ಈ ಹಿಂದೆ ಪ್ರತಿಭಟನೆ ನಡೆಸಿದ್ದರೂ, ಉದ್ಯೋಗ ಕಳೆದುಕೊಳ್ಳುವ ಅಥವಾ ಭೂಮಿ ಇದ್ದ ಕಾರಣ ಅವರಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ಈ ಯುವಜನರಿಗೆ ಕಳೆದುಕೊಳ್ಳಲು ಏನೂ ಇಲ್ಲ ಎಂದು ಅವರು ತಿಳಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯನ್ನು ನೆನಪಿಸಿಕೊಂಡ ಪ್ರಕಾಶ್ ರಾಜ್, ಆ ಸ್ಥಳದಲ್ಲಿ ಸುಮಾರು ಒಂದು ಲಕ್ಷ ಜನರು ಸೇರಿದ್ದರು ಮತ್ತು ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಇನ್ನೂ ನಾಲ್ಕು ಲಕ್ಷ ಜನರು ಇದ್ದರು. ಅವರು ಮೊದಲ ಬಾರಿಗೆ ದೆಹಲಿಗೆ ಬಂದಿದ್ದರು. ಮೊದಲ ಬಾರಿಗೆ ಅವರು ಪ್ರತಿಭಟಿಸಲು ಮತ್ತು ಸಂಸತ್ತಿನತ್ತ ಸಾಗಲು ಬಯಸಿದ್ದರು. ಆಗ ಸಂಸತ್ತು ನಡುಗಿತು. ಯುವಜನರು ಹಿಂಸಾಚಾರಕ್ಕೆ ಇಳಿಯದೆ ಪ್ರಶ್ನೆಗಳನ್ನು ಕೇಳಲು ಮುಂದಾದ ಬಗ್ಗೆ ತಮಗೆ ಹೆಮ್ಮೆ ಇದೆ ಎಂದರು.
"ಹಾಗಾಗಿ, ಒಂದು ದಶಕದ ನಂತರ ಇಂದು ನಾನು ನಿಮ್ಮ ಮುಂದೆ ನಿಂತಿರುವಾಗ, ಸರ್ವಾಧಿಕಾರಿ ಆಳ್ವಿಕೆಯ ಅಂತ್ಯ ಹತ್ತಿರವಾಗುತ್ತಿದೆ ಎಂಬ ವಿಶ್ವಾಸ ನನಗಿದೆ. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಳವಳ ಹೊಂದಿರುವ ಪೋಷಕರು ಕೂಡ ಈ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳು ಪ್ರತಿಭಟನೆಯ ಸ್ವರೂಪವನ್ನೇ ಬದಲಾಯಿಸಿವೆ ಎಂದು ಹೇಳಿದ ರಾಜ್, ಹಿಂದೆ ಆಡಳಿತಾರೂಢ ಪಕ್ಷಗಳೇ ಇದರ ಮೇಲೆ ಹಿಡಿತ ಹೊಂದಿದ್ದವು, ಆದರೆ ಈಗ ಯುವಜನರು ಇದನ್ನು ಬಳಸುತ್ತಿದ್ದಾರೆ. "ಈಗ ಪ್ರತಿಭಟನಾ ಸ್ಥಳಗಳು ಬದಲಾಗಿವೆ. ಅವು ಕೇವಲ 'ಜಂತರ್ ಮಂತರ್'ನಂತಹ ನಿರ್ದಿಷ್ಟ ಸ್ಥಳಗಳಿಗೆ ಸೀಮಿತವಾಗಿಲ್ಲ ನಾವು ಎಲ್ಲಿದ್ದೇವೆಯೋ ಅಲ್ಲೆಲ್ಲಾ ಪ್ರತಿಭಟನೆ ನಡೆಯುತ್ತಿದೆ ಎಂದು ಅವರು ಹೇಳಿದರು.
ರಾಜಕೀಯದಲ್ಲಿ ನಾಗರಿಕರು ಹೆಚ್ಚಿನ ಪಾತ್ರ ವಹಿಸಬೇಕೆಂದು ಕರೆ ನೀಡಿದ ಪ್ರಕಾಶ್ ರಾಜ್, ನಾಗರಿಕರು ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರೀಕ್ಷಿಸುವ ಬದಲು, ಜನರಿಂದ ಆಯ್ಕೆಯಾದ ಪ್ರತಿನಿಧಿಗಳೇ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಕೇವಲ ಬಿಜೆಪಿ ಅಥವಾ ಪ್ರಸ್ತುತ ಸರ್ಕಾರವನ್ನು ಸೋಲಿಸುವುದರಿಂದ ಮಾತ್ರವೇ ಏನೂ ಸಾಧಿಸುವಂತಾಗುವುದಿಲ್ಲ. ಈ ದೇಶದ ಯಾವುದೇ ವಿರೋಧ ಪಕ್ಷವು ಬಿಜೆಪಿಯನ್ನು ಕೆಳಗಿಳಿಸುವುದಿಲ್ಲ. ಏಕೆಂದರೆ ರಾಜಕೀಯದಲ್ಲಿ ವಿರೋಧ ಪಕ್ಷಗಳು ಗೆಲ್ಲುವುದಿಲ್ಲ, ಬದಲಿಗೆ ಆಡಳಿತಾರೂಢ ಪಕ್ಷಗಳು ಸೋಲುತ್ತವೆ ಎಂದು ಅವರು ಹೇಳಿದರು.
ಬೇರೊಂದು ರೂಪದಲ್ಲಿ ಮತ್ತೊಂದು "ಸರ್ವಾಧಿಕಾರಿ" ಶಕ್ತಿ ಅಧಿಕಾರಕ್ಕೆ ಬರದಂತೆ ತಡೆಯಲು, ಪರ್ಯಾಯ ವ್ಯವಸ್ಥೆಯನ್ನು ಆಯ್ಕೆ ಮಾಡುವಾಗ ಯುವಜನರು ರಾಜಕೀಯವಾಗಿ ಜಾಗರೂಕರಾಗಿರಬೇಕು. ಸರ್ವಾಧಿಕಾರಿ ಶಕ್ತಿಗಳನ್ನು ಕೆಳಗಿಳಿಸಲು ಮಾತ್ರವಲ್ಲದೆ, ಪರ್ಯಾಯವನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಪ್ರತಿಯೊಬ್ಬ ನಾಗರಿಕನಿಗೆ ಮತ್ತು ಯುವಕನಿಗೆ ಅರಿವು ಮೂಡಿಸಲು DYFI, ಯುವಜನರು ಮತ್ತು ಹಿರಿಯರು ನಿರಂತರವಾಗಿ ಶ್ರಮಿಸಬೇಕು ಎಂದು ಅವರು ನುಡಿದರು.
ತಕ್ಷಣದ ರಾಜಕೀಯ ಹೋರಾಟದಲ್ಲಿ ಗೆಲ್ಲುವುದು ತಮ್ಮ ಉದ್ದೇಶವಲ್ಲ, ಬದಲಿಗೆ ನ್ಯಾಯಕ್ಕಾಗಿ ಹೋರಾಡುವುದು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುವುದೇ ತಮ್ಮ ಗುರಿ ಎಂದು ರಾಜ್ ತಿಳಿಸಿದರು.