ವಿಶಾಖಪಟ್ಟಣಂನಲ್ಲಿ 5 ವರ್ಷದ UKG ಬಾಲಕ ಮೃತ್ಯು: ಹೋಂವರ್ಕ್ ಮಾಡದಿದ್ದಕ್ಕೆ ಶಿಕ್ಷಕಿ ಹೊಡೆದು ಸಾವು ಎಂದು ಪೋಷಕರ ಆರೋಪ-Video

ಮೃತ ಬಾಲಕನನ್ನು ಟಿ. ಪ್ರಣಯ್ ತೇಜ್ ಎಂದು ಗುರುತಿಸಲಾಗಿದ್ದು, ಒನ್-ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಟೌನ್ ಕೊತ್ತಾರೋಡ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿದ್ದ. ಅಡುಗೆ ಕೆಲಸ ಮಾಡುವ ಕೃಷ್ಣ ಪ್ರಸಾದ್ ಮತ್ತು ಸಾಯಿ ಲಕ್ಷ್ಮಿ ದಂಪತಿಯ ಪುತ್ರ.
Child beaten by teacher
ಬಾಲಕನಿಗೆ ಶಿಕ್ಷಕಿ ಹೊಡೆಯುತ್ತಿರುವ ದೃಶ್ಯ
Updated on

ವಿಶಾಖಪಟ್ಟಣಂ: ವಿಶಾಖಪಟ್ಟಣಂನ ಖಾಸಗಿ ಶಾಲೆಯೊಂದರಲ್ಲಿ ಐದು ವರ್ಷದ ಯುಕೆಜಿ ಬಾಲಕನಿಗೆ ಹೋಂವರ್ಕ್ ಮಾಡಿಕೊಂಡು ಬರಲಿಲ್ಲ ಎಂದು ಶಿಕ್ಷಕಿಯೊಬ್ಬರು ಹೊಡೆದ ಕಾರಣ ತಲೆಸುತ್ತಿ ಬಿದ್ದು ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಮೃತ ಬಾಲಕನನ್ನು ಟಿ. ಪ್ರಣಯ್ ತೇಜ್ ಎಂದು ಗುರುತಿಸಲಾಗಿದ್ದು, ಒನ್-ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಟೌನ್ ಕೊತ್ತಾರೋಡ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿದ್ದ. ಅಡುಗೆ ಕೆಲಸ ಮಾಡುವ ಕೃಷ್ಣ ಪ್ರಸಾದ್ ಮತ್ತು ಸಾಯಿ ಲಕ್ಷ್ಮಿ ದಂಪತಿಯ ಪುತ್ರ.

ಆ ದಿನ ಬೆಳಗ್ಗೆ ಕೆಲವು ಹೋಂವರ್ಕ್ ಪೂರ್ಣಗೊಳಿಸಿರದ ಕಾರಣ ಪ್ರಣಯ್ ಶಾಲೆಗೆ ಹೋಗಲು ಹಿಂದೇಟು ಹಾಕಿದ್ದ ಎಂದು ಪೋಷಕರು ತಿಳಿಸಿದ್ದಾರೆ. ಕೊನೆಗೆ ಪೋಷಕರ ಒತ್ತಾಯಕ್ಕೆ ಶಾಲೆಗೆ ತೆರಳಿದ್ದರೂ, ಆತ ಮಂಕಾಗಿದ್ದ, ತರಗತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿಸುತ್ತಿರಲಿಲ್ಲವಂತೆ.

Child beaten by teacher
ಮಕ್ಕಳ ಕಣ್ಣೀರಿಗೂ ಕರಗದ ಮನಸ್ಸು: ವಿಚ್ಛೇನದ ನೀಡಿ ಪ್ರಿಯಕರನ ಜೊತೆ ಹೋಗುತ್ತಿದ್ದ ತಾಯಿಯನ್ನು ಪರಿಪರಿಯಾಗಿ ಬೇಡಿದ ಮಕ್ಕಳು, Video!

ತರಗತಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಿಕ್ಷಕಿ ವಿದ್ಯಾರ್ಥಿಗಳ ಹೋಂವರ್ಕ್ ನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತಿರುವುದು ಕಂಡುಬಂದಿದೆ. ಪ್ರಣಯ್ ಖಾಲಿ ಸ್ಲೇಟ್ ತೋರಿಸಿದಾಗ ಶಿಕ್ಷಕಿ ಆತನನ್ನು ತನ್ನ ಕಡೆಗೆ ಎಳೆದುಕೊಂಡು, ಶರ್ಟ್‌ನ ಗುಂಡಿಗಳನ್ನು ಬಿಚ್ಚಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ಬಾಲಕ ತರಗತಿಯಲ್ಲೇ ಕುಸಿದು ಬಿದ್ದಿದ್ದಾನೆ.

ಬಾಲಕನನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಘಟನೆ ಬೆಳಗ್ಗೆ 11ರ ಸುಮಾರಿಗೆ ನಡೆದಿದೆ. ಆದರೆ ಶಾಲೆಯವರು ಮಧ್ಯಾಹ್ನ 12.50ರ ಸುಮಾರಿಗೆ ತಮಗೆ ಮಾಹಿತಿ ನೀಡಿದರು ಎಂದು ಪೋಷಕರು ಆರೋಪಿಸಿದ್ದಾರೆ. ಬಳಿಕ ಸಂಬಂಧಿಕರು ಶಾಲೆ ಮತ್ತು ಆಸ್ಪತ್ರೆಯ ಹೊರಗೆ ಜಮಾಯಿಸಿ, ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಜಿಲ್ಲಾ ಶಿಕ್ಷಣಾಧಿಕಾರಿ ಪ್ರೇಮ್ ಕುಮಾರ್ ಮತ್ತು ಒನ್-ಟೌನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವರ ಪ್ರಸಾದ್ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಇಒ ತಿಳಿಸಿದ್ದಾರೆ.

ಬಾಲಕನ ಪೋಷಕರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಸಾವಿಗೆ ಕಾರಣವಾದ ಪರಿಸ್ಥಿತಿಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿನ ನಿಖರ ಕಾರಣ ತಿಳಿದುಬರಲಿದೆ.

ಈ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಶಿಕ್ಷಣ ಮತ್ತು ಐಟಿ ಸಚಿವ ನಾರಾ ಲೋಕೇಶ್, ಶಾಲಾ ಆಡಳಿತ ಮಂಡಳಿ ಸೇರಿದಂತೆ ಘಟನೆಗೆ ಹೊಣೆಗಾರರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ದುಃಖತಪ್ತ ಕುಟುಂಬಕ್ಕೆ ಸರ್ಕಾರದ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ತನಿಖೆಯ ಭಾಗವಾಗಿ ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com