ಇಲಾಖೆಗಳ ನಡುವೆ ಪ್ರತ್ಯೇಕತೆ ಬೇಡ, ಆಡಳಿತದಲ್ಲಿ ದೀರ್ಘಕಾಲೀನ ದೃಷ್ಟಿಕೋನ ಇರಲಿ: ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರಧಾನಿ ಮೋದಿ ಪಾಠ

ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಕುರಿತು ಅಧಿಕಾರಿಗಳು ದೀರ್ಘಕಾಲೀನ ದೃಷ್ಟಿಕೋನವನ್ನು ಹೊಂದಿರಬೇಕು ಎಂದು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
PM Narendra Modi
ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆ ಬಳಿಕ, ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಮೂರನೇ ಉನ್ನತ ಮಟ್ಟದ ಸಭೆ ನಡೆಸಿದರು. ಮೂಲಸೌಕರ್ಯ ಮತ್ತು ಸಂಪರ್ಕ, ಭದ್ರತೆ ಹಾಗೂ ವಿದೇಶಾಂಗ ವ್ಯವಹಾರಗಳು ಮತ್ತು ಆಡಳಿತಕ್ಕೆ ಸಂಬಂಧಿಸಿದ ಸಚಿವಾಲಯಗಳು ಹಾಗೂ ಇಲಾಖೆಗಳ ಮುಂದಿನ ಕಾರ್ಯಸೂಚಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.

ಇಬ್ಬರು ಕಾರ್ಯದರ್ಶಿಗಳ ಗುಂಪುಗಳೊಂದಿಗೆ ಚರ್ಚೆ ನಡೆಸಿ ತಕ್ಷಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಅಂಕಿ-ಅಂಶಗಳನ್ನು ಪರಿಶೀಲಿಸುವುದರ ಜತೆಗೆ, ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಕುರಿತು ಅಧಿಕಾರಿಗಳು ದೀರ್ಘಕಾಲೀನ ದೃಷ್ಟಿಕೋನವನ್ನು ಹೊಂದಿರಬೇಕು ಎಂದು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಭೆಯಲ್ಲಿ ಇಲಾಖೆಗಳ ನಡುವಿನ ಪ್ರತ್ಯೇಕತೆ ಮನೋಭಾವವನ್ನು ನಿವಾರಿಸುವ ಸವಾಲಿನ ಕುರಿತು ಪ್ರಧಾನಿ ಚರ್ಚಿಸಿದರು. ಇದು ಕೇವಲ ಸಾಂಸ್ಥಿಕ ಸಮಸ್ಯೆಯಲ್ಲ, ಮನೋಭಾವಕ್ಕೆ ಸಂಬಂಧಿಸಿದ ಸಮಸ್ಯೆಯೂ ಹೌದು. ವಿಭಾಗಗಳ ಪ್ರತ್ಯೇಕ ಕಾರ್ಯವೈಖರಿ ಯಾವುದೇ ರೀತಿ ಇದ್ದರೂ ಅಧಿಕಾರಿಗಳು ತಮ್ಮ ಜವಾಬ್ದಾರಿಗಳ ಹೊಣೆಗಾರಿಕೆಯನ್ನು ವಹಿಸಿಕೊಂಡು, ಸರ್ಕಾರದ ಕಾರ್ಯವೈಖರಿಯಲ್ಲಿ ಬಲವಾದ ಬದ್ಧತೆಯ ಭಾವನೆಯೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

image-fallback
ಸರ್ಕಾರದ ಇಲಾಖೆಗಳು ಒಟ್ಟಾಗಿ ವಿಶಾಲ ದೃಷ್ಟಿಕೋನದಿಂದ ಕೆಲಸ ಮಾಡಬೇಕು: ಪ್ರಧಾನಿ ಮೋದಿ

ಸಾಮೂಹಿಕ ಪ್ರಯತ್ನದ ಮಹತ್ವವನ್ನು ಸಾರಿದ ಪ್ರಧಾನಿ ಮೋದಿ, ಕೋವಿಡ್-19 ಸಾಂಕ್ರಾಮಿಕ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಣಾಮಕಾರಿಯಾಗಿ ಒಟ್ಟಾಗಿ ಕೆಲಸ ಮಾಡಿದ ಅನುಭವವನ್ನು ಉಲ್ಲೇಖಿಸಿದರು. ಇಂತಹ ಸಮನ್ವಯ ವ್ಯವಸ್ಥೆಗಳು ಬಿಕ್ಕಟ್ಟಿನ ಸಂದರ್ಭಗಳಿಗೆ ಮಾತ್ರ ಸೀಮಿತವಾಗದೆ, ಸರ್ಕಾರದ ಕಾರ್ಯಸಂಸ್ಕೃತಿಯ ಸಹಜ ಭಾಗವಾಗಬೇಕು ಎಂದು ಅವರು ಹೇಳಿದರು.

ಮಾನವ ಹಸ್ತಕ್ಷೇಪ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಕೇಂದ್ರ ಸರ್ಕಾರ ಸ್ಥಾನ ನೀಡುವುದರ ಜತೆಗೆ ಕೃತಕ ಬುದ್ಧಿಮತ್ತೆ (AI)ಯ ಪರಿಣಾಮಕಾರಿ ಬಳಕೆಗೆ ಪ್ರಧಾನಿ ಕರೆ ನೀಡಿದರು. ಎಐ ಸಾಮರ್ಥ್ಯಗಳನ್ನು ಮಾನವ ಪರಿಣತಿಯೊಂದಿಗೆ ಸಂಯೋಜಿಸುವ ನವೀನ ಮಾರ್ಗಗಳನ್ನು ಅಧಿಕಾರಿಗಳು ಅನ್ವೇಷಿಸಬೇಕು ಎಂದು ಪ್ರಧಾನ ಮಂತ್ರಿಗಳು ಸಲಹೆ ನೀಡಿದರು.

PM Narendra Modi
Watch | "ಮೋದಿ ಏಂಜಲ್ ನಂತೆ ಕಾಣುವ ಅತ್ಯಂತ ಸುಂದರ ವ್ಯಕ್ತಿ, ಆದ್ರೆ ಕಿಲ್ಲರ್"

ದತ್ತಾಂಶವು ರಾಷ್ಟ್ರೀಯ ಸಂಪತ್ತು ಹಾಗೂ ಭವಿಷ್ಯದ ಪ್ರಮುಖ ಸಂಪನ್ಮೂಲವಾಗಿದೆ ಎಂದು ಹೇಳಿದರು. ದತ್ತಾಂಶ ಸಂಗ್ರಹಣೆ, ಸಂಗ್ರಹಣೆ ನಿರ್ವಹಣೆಗೆ ಸರ್ಕಾರ ಗಣನೀಯ ಸಂಪನ್ಮೂಲಗಳನ್ನು ಹೂಡಿಕೆ ಮಾಡುತ್ತಿದ್ದರೂ, ಇಲಾಖೆಗಳ ನಡುವಿನ ಸಮನ್ವಯದ ವ್ಯವಸ್ಥೆ ಮತ್ತು ವಿಭಜಿತ ವ್ಯವಸ್ಥೆಗಳಿಂದಾಗಿ ಅದರ ಸಂಪೂರ್ಣ ಸಾಮರ್ಥ್ಯವನ್ನು ಯಾವಾಗಲೂ ಬಳಸಿಕೊಳ್ಳಲಾಗುತ್ತಿಲ್ಲ.

ವಿವಿಧ ಉದ್ದೇಶಗಳಿಗಾಗಿ ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ವ್ಯತ್ಯಾಸಗಳಿರುವುದನ್ನು ಉಲ್ಲೇಖಿಸಿದ ಅವರು, ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಹೆಚ್ಚಿನ ಅಂತರ ಕಾರ್ಯಾಚರಣೆಗೆ ಅನುಕೂಲವಾಗುವ ಹಾಗೂ ದತ್ತಾಂಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವ ಪರಿಹಾರಗಳನ್ನು ಕಂಡುಕೊಳ್ಳುವಂತೆ ಕರೆ ನೀಡಿದರು.

ನೀತಿ ರೂಪಿಸುವಿಕೆಯಲ್ಲಿ ಹೊಸ ದೃಷ್ಟಿಕೋನಗಳನ್ನು ತರಲು ಸರ್ಕಾರಿ ಇಲಾಖೆಗಳು, ವಿಶ್ವವಿದ್ಯಾಲಯಗಳು ಮತ್ತು ಯುವಜನರ ನಡುವೆ ಹೆಚ್ಚಿನ ಸಂಪರ್ಕ ಅಗತ್ಯ ಎಂದರು. ವಿಶ್ವವಿದ್ಯಾಲಯಗಳು ಮತ್ತು ಯುವ ಪೀಳಿಗೆಯೊಂದಿಗೆ ವ್ಯಾಪಕ ಸಂವಾದ ನಡೆಸುವುದರಿಂದ ಆಡಳಿತದಲ್ಲಿ ಹೊಸ ಹಾಗೂ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರತಾದ ಆಲೋಚನೆಗಳನ್ನು ತರಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ರಕ್ಷಣಾ ಕ್ಷೇತ್ರ ಸೇರಿದಂತೆ ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡುವಂತೆ ಪ್ರಧಾನಿ ಕರೆ ನೀಡಿದರು. ಭಾರತದ ರಕ್ಷಣಾ ಉದ್ಯಮವನ್ನು ಮತ್ತಷ್ಟು ಬಲಪಡಿಸಿ ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ನವೀನ ರಕ್ಷಣಾ ಕೋರ್ಸ್‌ಗಳನ್ನು ರೂಪಿಸುವುದು ಹಾಗೂ ಈ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಬಲಪಡಿಸುವ ಮಹತ್ವವನ್ನು ಹೇಳಿದರು.

ಭಾರತದ ಸಾಗರ ವಲಯವನ್ನು ಬಲಪಡಿಸಲು ಸಮಗ್ರ ಕಾರ್ಯತಂತ್ರದ ಅಗತ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಹಡಗು ನಿರ್ಮಾಣಕ್ಕೆ ಮೂಲಸೌಕರ್ಯ ಸ್ಥಾನಮಾನ ನೀಡಿರುವುದನ್ನು ಸ್ಮರಿಸಿದ ಪ್ರಧಾನಿ, ಈ ಕ್ರಮದ ಉದ್ದೇಶಗಳು ‘ಮಿಷನ್ ಮೋಡ್’ನಲ್ಲಿ ಈಡೇರುತ್ತಿವೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದರು.

ಭಾರತವು ಬಂದರುಗಳ ಅಭಿವೃದ್ಧಿಯಿಂದ ಬಂದರು ಆಧಾರಿತ ಅಭಿವೃದ್ಧಿಯತ್ತ ಸಾಗಬೇಕಾದ ಅಗತ್ಯವನ್ನು ಅವರು ಪುನರುಚ್ಚರಿಸಿದರು.

ಪ್ರಧಾನಿ ಕಚೇರಿ ಹೊರಡಿಸಿರುವ ಹೇಳಿಕೆಯ ಪ್ರಕಾರ, ಉತ್ಪಾದನಾ ಘಟಕಗಳು ಮತ್ತು ರಫ್ತು ಆಧಾರಿತ ಘಟಕಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಅಗತ್ಯವನ್ನೂ ಸಾರಿದರು. ಇದರಿಂದ ಭಾರತದ ಉತ್ಪಾದನಾ ಮತ್ತು ರಫ್ತು ಸಾಮರ್ಥ್ಯಗಳು ದೇಶದ ಸಾಗರ ಮೂಲಸೌಕರ್ಯದ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಸಂಕೀರ್ಣ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಸಂಪೂರ್ಣ ಸರ್ಕಾರಿ ವ್ಯವಸ್ಥೆಯ ಸಮಗ್ರ ಕಾರ್ಯವಿಧಾನ, ಹೆಚ್ಚಿನ ಸಮನ್ವಯ, ನವೀನ ಚಿಂತನೆ ಮತ್ತು ಸಾಮೂಹಿಕ ಹೊಣೆಗಾರಿಕೆಯ ಮಹತ್ವವನ್ನು ಪ್ರಧಾನಿ ಪುನರುಚ್ಚರಿಸಿದರು.

ಅಧಿಕಾರಿಗಳ ನಡುವೆ ಅನೌಪಚಾರಿಕ ಸಂವಹನ ಮತ್ತು ತಂಡದ ಮನೋಭಾವ ಬೆಳೆಸುವ ಅಗತ್ಯವನ್ನೂ ಅವರು ಒತ್ತಿಹೇಳಿದರು. ಹಿರಿಯ ಅಧಿಕಾರಿಗಳು ಕಿರಿಯ ಸಹೋದ್ಯೋಗಿಗಳೊಂದಿಗೆ ಹೆಚ್ಚಿನ ವೈಯಕ್ತಿಕ ಹಾಗೂ ಅನೌಪಚಾರಿಕ ಸಂಪರ್ಕ ಬೆಳೆಸಿಕೊಂಡು, ವಿವಿಧ ಕೇಡರ್‌ಗಳು ಮತ್ತು ಇಲಾಖೆಗಳ ನಡುವೆ ಬಲವಾದ ಜಾಲವನ್ನು ನಿರ್ಮಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com