

ಪುಣೆ (ಮಹಾರಾಷ್ಟ್ರ): ಕಾಂಗ್ರೆಸ್ ವರಿಷ್ಟ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ 'ಛತ್ರೋನ್ ಕಿ ಗೂಂಜ್' (ವಿದ್ಯಾರ್ಥಿಗಳ ಧ್ವನಿ) ವಿದ್ಯಾರ್ಥಿ ಸಂವಾದ ಕಾರ್ಯಕ್ರಮವು ಪುಣೆಯಲ್ಲಿ ನಡೆಯಲಿದೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಛತ್ರೋನ್ ಕಿ ಗೂಂಜ್ ಅಲ್ಲ ಬದಲಾಗಿ, ಇದನ್ನು 'ಪೈಸೆ ಕಿ ಗೂಂಜ್' ಎಂದು ಕರೆದಿದೆ. ಈ ಮೂಲಕ ಯುವಕರನ್ನು ಸೆಳೆಯಲು ಕಾಂಗ್ರೆಸ್ ಪಕ್ಷವು ಸಾಮಾಜಿಕ ಜಲತಾಣದ ಇನ್‌ಫ್ಲುಯೆನ್ಸರ್‌ಗಳಿಗೆ ಸಾವಿರಾರು ರೂಪಾಯಿಗಳವರೆಗೆ ಹಣ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ. ಆ ಕುರಿತ ವರದಿ ಇಲ್ಲಿದೆ:
ಪೈಸೆ ಕಿ ಗೂಂಜ್ ಎಂದ ಬಿಜೆಪಿ
ರಾಹುಲ್ ಗಾಂಧಿ ಅವರ 'ಛತ್ರೋನ್ ಕಿ ಗೂಂಜ್' (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದಲ್ಲಿ ಜನಸಮೂಹವನ್ನು ಮತ್ತು ಯುವಕರನ್ನು ಸೆಳೆಯಲು ಕಾಂಗ್ರೆಸ್ ಪಕ್ಷವು ಸಾಮಾಜಿಕ ಜಲತಾಣದ ಸುಮಾರು 3 ಸಾವಿರ ಇನ್‌ಫ್ಲುಯೆನ್ಸರ್‌ಗಳಿಗೆ ತಲಾ 30,000 ದಿಂದ 35,000 ರೂಪಾಯಿಗಳವರೆಗೆ ಹಣ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ. ಇದರೊಂದಿಗೆ, ರಾಹುಲ್ ಗಾಂಧಿಯವರನ್ನು ಯುವ ನಾಯಕ ಎಂದು ಬಿಂಬಿಸಲು ಕಾಂಗ್ರೆಸ್ ದುಬಾರಿ ಬೆಲೆಯ 'ಪಿಆರ್ ಸ್ಟಂಟ್' ಮತ್ತು ಕೃತಕ ಪ್ರಚಾರದ ಮೊರೆ ಹೋಗಿದೆ ಎಂದು ದೂರಿದ ಬಿಜೆಪಿ ವಕ್ತಾರರು, ಈ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ಒಟ್ಟು 10 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಖರ್ಚು ಮಾಡಿದೆ ಎಂದು ಆರೋಪಿಸಿದೆ. ಇದರೊಂದಿಗೆ, ಈ ಹಣದ ಮೂಲ ಯಾವುದು ಮತ್ತು ಇದನ್ನು ಯಾರು ವಿತರಿಸಿದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಜೊತೆಗೆ, ಇನ್‌ಫ್ಲುಯೆನ್ಸರ್ಸ್ ಗಳಿಗೆ ಹಣ ಮತ್ತು ಪ್ರಯಾಣದ ವೆಚ್ಚ ನೀಡುವ ಬಗ್ಗೆ ನಡೆದಿರುವ ಸಂಭಾಷಣೆಯ ಆಡಿಯೋ ಹಾಗೂ ವಿಡಿಯೋ ತುಣುಕೊಂದನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ರಾಜಕೀಯ ಲಾಭದ ಯತ್ನ ಎಂದ ಬಿಜೆಪಿ
ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಕೇಶವ್ ಉಪಾಧ್ಯಾಯ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ವಿಚಾರಗಳಿಲ್ಲದೆ ಕಾಂಗ್ರೆಸ್ ಇಂತಹ ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ತಿರುಗೇಟು
ಬಿಜೆಪಿಯ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಕಾಂಗ್ರೆಸ್ ನಾಯಕರು, ಯುವ ಪೀಳಿಗೆ ಹಾಗೂ ಜೆನ್ ಜಿ ವಿದ್ಯಾರ್ಥಿಗಳಲ್ಲಿ ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಕಂಡು ಬಿಜೆಪಿ ಭಯಭೀತಗೊಂಡಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ಮಹಾರಾಷ್ಟ್ರದ ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕರು ಕೂಡ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದು, ವಿದ್ಯಾರ್ಥಿಗಳ ಮತ್ತು ಯುವಕರ ಸಮಸ್ಯೆಗಳ ಧ್ವನಿಯಾಗಲಿರುವ ಕಾರ್ಯಕ್ರಮವನ್ನು ಹತ್ತಿಕ್ಕಲು ಬಿಜೆಪಿ ಇಂತಹ ರಾಜಕೀಯ ತಂತ್ರಗಳನ್ನು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಏನಿದು ಛತ್ರೋನ್ ಕಿ ಗೂಂಜ್?
ಛತ್ರೋನ್ ಕಿ ಗೂಂಜ್ ಎನ್ನುವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷವು ವಿಶೇಷವಾಗಿ ಮಹಿಳಾ ವಿದ್ಯಾರ್ಥಿನಿಯರಿಗಾಗಿ ಪುಣೆಯಲ್ಲಿ ಆಯೋಜಿಸಲಾಗಿದೆ. ಶಿಕ್ಷಣ, ಉದ್ಯೋಗಾವಕಾಶಗಳು, ಭದ್ರತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇನ್ನು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪುಣೆ ಪೊಲೀಸರು ಸುಮಾರು 30 ಕಠಿಣ ಷರತ್ತುಗಳೊಂದಿಗೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ.