

ರಾಂಚಿ: ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ 38 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 21ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಂತ್ರಸ್ತೆ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ರಿಫಾರ್ಮ್ಸ್ ಮಂಚ್‌ನ ಸದಸ್ಯೆಯಾಗಿದ್ದು, ಬಿಜೆಪಿ ನಾಯಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಅವರೊಂದಿಗೆ ಸೋಮವಾರ ಕೋಟ್ವಾಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಪ್ರಕರಣದಲ್ಲಿ ಎಂಟು ಮಂದಿಯನ್ನು ಹೆಸರಿಸಲಾಗಿದ್ದು, ಇನ್ನೂ 30 ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಕಿರುಕುಳ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೋಟ್ವಾಲಿ ಠಾಣೆಯ ಇನ್‌ಚಾರ್ಜ್ ಅಧಿಕಾರಿ ಸನೋಜ್ ಚೌಧರಿ ತಿಳಿಸಿದ್ದಾರೆ.
ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಆಲ್ಬರ್ಟ್ ಎಕ್ಕಾ ಚೌಕ್ ಬಳಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಸಂತ್ರಸ್ತೆ ಹೇಳಿದ್ದೇನು?
“ನಾವು ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದೆವು. ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕೃತಿ ದಹಿಸಲು ಮುಂದಾಗಿದ್ದೆವು. ಈ ವೇಳೆ ಸುಮಾರು ಎಂಟು ಮಂದಿ ಪರಿಚಿತರು ಹಾಗೂ 30ಕ್ಕೂ ಹೆಚ್ಚು ಅಪರಿಚಿತರು ನನ್ನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದರು” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ
ಘಟನೆಯನ್ನು ಖಂಡಿಸಿರುವ ಬಾಬುಲಾಲ್ ಮರಾಂಡಿ, ಪ್ರಜಾಸತ್ತಾತ್ಮಕವಾಗಿ ತಮ್ಮ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿಗಳ ಮೇಲೆ “ಜೆಎಂಎಂ ಗೂಂಡಾಗಳು” ನಡೆಸಿದ ಹೇಡಿತನದ ದಾಳಿ ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ. ಅಂತೆಯೇ “ಬಿಜೆಪಿ ವಿದ್ಯಾರ್ಥಿಗಳ ಪರವಾಗಿ ದೃಢವಾಗಿ ನಿಂತಿದೆ. ಅವರ ಹೋರಾಟಕ್ಕೆ ಎಲ್ಲ ಹಂತಗಳಲ್ಲೂ ಬೆಂಬಲ ನೀಡಲಿದೆ” ಎಂದು ಮರಾಂಡಿ ತಿಳಿಸಿದ್ದಾರೆ.