

ಚಂಡೀಗಢ (ಹರಿಯಾಣ): ಸಂಸತ್ತಿನ ಅಧಿವೇಶನವೇ ಆಗಲಿ ಅಥವಾ ಯಾವುದೇ ರಾಜ್ಯದ ವಿಧಾನಸಭೆಯ ಅಧಿವೇಶನವಾಗಲಿ ಪೂರ್ಣ ಪ್ರಮಾಣದಲ್ಲಿ ನಡೆಯಲ್ಲ! ಒಂದು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಗದ್ದಲದಿಂದ ಅಧಿವೇಶನಗಳು ಮುಂದೂಡುತಲೆ ಇರುತ್ತವೆ. ಜೊತೆಗೆ ಈ ಅಧಿವೇಶನಗಳಿಗೆ ಹಾಜಾರಗುವ ಸದಸ್ಯರ ಸಂಖ್ಯೆ ಕೂಡ ಕಮ್ಮಿಯೇ. ಅದರಲ್ಲೂ, ಕೆಲವು ಸದಸ್ಯರು ಅನಾರೋಗ್ಯದ ನೆಪವೊಡ್ಡಿ ವರ್ಷವಾದರೂ ಸದನದತ್ತ ಮುಖ ಮಾಡುವುದೇ ಇಲ್ಲ! ಇದರ ನಡುವೆ, ಸದನಕ್ಕೆ ಬಂದು ಗದ್ದಲ ಉಂಟು ಮಾಡಿದ ಆರೋಪದ ಮೇರೆಗೆ ಶಾಸಕರು ಅಮಾನತು ಆಗುವುದು ಸಾಮಾನ್ಯವಾಗಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಹರಿಯಾಣದಲ್ಲಿ ನಡೆದಿರುವ ಘಟನೆ. ಆ ಕುರಿತ ವರದಿ ಇಲ್ಲಿದೆ:
ಹರಿಯಾಣ ವಿಧಾನಸಭೆಯ ಮುಂಗಾರು ಅಧಿವೇಶನದ ಆರಂಭದ ದಿನವೇ ಸದನದಲ್ಲಿ ಭಾರಿ ಗದ್ದಲ ಮತ್ತು ನಿಯಮ ಉಲ್ಲಂಘನೆ ಆರೋಪದ ಮೇಲೆ 8 ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಹರ್ವಿಂದರ್ ಕಲ್ಯಾಣ್ ಅವರು ಆದೇಶ ಹೊರಡಿಸಿದ್ದಾರೆ. ವಿಕಾಸ್ ಸಹಾರನ್, ಆದಿತ್ಯ ಸುರ್ಜೇವಾಲಾ, ಗೋಕುಲ್ ಸೆಟಿಯಾ, ಬಲರಾಮ್ ಡಾಂಗಿ, ಇಂದುರಾಜ್ ನರ್ವಾಲ್, ದೇವೇಂದರ್ ಹನ್ಸ್, ಶಕುಂತಲಾ ಖಟಕ್, ಜಸ್ಸಿ ಪೆಟ್ವರ್ ಅವರು ಅಮಾನತು ಆದ ಶಾಸಕರಾಗಿದ್ದಾರೆ.
ಅಮಾನತಿಗೆ ಅಸಲಿ ಕಾರಣವೇನು?
ಅಧಿವೇಶನದ ವೇಳೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ನೀಡಿದ ಒಂದು ಹೇಳಿಕೆಯನ್ನು ಕಾಂಗ್ರೆಸ್ ಶಾಸಕರು ತಮಗೆ "ಗೂಂಡಾಗಳು" ಎಂದು ಕರೆದಿದ್ದಾರೆ ಎಂದು ಅರ್ಥೈಸಿಕೊಂಡರು. ಈ ಹೇಳಿಕೆಯನ್ನು ಸದನದ ನಡಾವಳಿಯಿಂದ ತೆಗೆದುಹಾಕಬೇಕು ಎಂದು ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಮತ್ತು ಕಾಂಗ್ರೆಸ್ ಶಾಸಕರು ಭಾರಿ ಪಟ್ಟು ಹಿಡಿದರು. ಈ ಬಗ್ಗೆ, ಸ್ಪೀಕರ್ ಅವರು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರೂ ಸಮಾಧಾನಗೊಳ್ಳದ ಕಾಂಗ್ರೆಸ್ ಶಾಸಕರು, ಸದನದ ಭಾವಿಗೆ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಇದರೊಂದಿಗೆ, ಪೇಪರ್ ಲೀಕ್ ಹಗರಣ ಸೇರಿದಂತೆ ವಿವಿಧ ವಿಷಯಗಳ ಕುರಿತ ಬ್ಯಾನರ್ ಮತ್ತು ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸಿದರು. ಇನ್ನು, ಪ್ರತಿಭಟನೆಯ ತೀವ್ರತೆ ಹೆಚ್ಚಾದಾಗ ಸ್ಪೀಕರ್ ಹರ್ವಿಂದರ್ ಕಲ್ಯಾಣ್ ಅವರು, "ಶಾಸಕರು ಸದನದ ನಿಯಮಾವಳಿ ಮತ್ತು ಗೌರವವನ್ನು ಗಾಳಿಗೆ ತೂರುತ್ತಿದ್ದಾರೆ. ವಿಡಿಯೋಗಳನ್ನು ಪ್ರದರ್ಶಿಸುತ್ತಾ ಭದ್ರತಾ ಸಿಬ್ಬಂದಿಯ ಮೇಲೆಯೇ ಕೈಮಾಡುತ್ತಿದ್ದಾರೆ" ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.
ಅದರಂತೆ, ಕಾಂಗ್ರೆಸ್ ಶಾಸಕರು ಪದೇ ಪದೇ ಎಚ್ಚರಿಕೆ ನೀಡಿದರೂ ಶಾಂತರಾಗದಿದ್ದಾಗ, ಸ್ಪೀಕರ್ ಅವರು ಎಂಟು ಶಾಸಕರನ್ನು ಆ ದಿನದ ಮಟ್ಟಿಗೆ ಅಮಾನತುಗೊಳಿಸಿ ತಕ್ಷಣವೇ ಸದನದಿಂದ ಹೊರಗೆ ಕಳುಹಿಸುವಂತೆ ಮಾರ್ಷಲ್‌ಗಳಿಗೆ ಆದೇಶ ನೀಡಿದರು. ಇನ್ನು, ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, "ನಾನು ನನ್ನ ಇಡೀ ರಾಜಕೀಯ ಜೀವನದಲ್ಲಿ ಶಾಸಕರೊಂದಿಗೆ ಇಂತಹ ಕೀಳು ನಡವಳಿಕೆಯನ್ನು ಎಲ್ಲಿಯೂ ನೋಡಿಲ್ಲ. ವಿರೋಧ ಪಕ್ಷ ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯವಿಲ್ಲದ ಸರ್ಕಾರ ನಮ್ಮನ್ನು ಹತ್ತಿಕ್ಕಲು ನೋಡುತ್ತಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.