‘ಈ ಮಾತನ್ನು ನೀವು ಭಾರತದಲ್ಲಿ ಏಕೆ ಹೇಳೋದಿಲ್ಲ?’: ಮೋಹನ್ ಭಾಗವತ್ ಹೇಳಿಕೆಗೆ ವಿಪಕ್ಷಗಳ ತೀವ್ರ ಟೀಕೆ

ಆದರೆ ಬಿಜೆಪಿ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ಸ್ವಾಗತಿಸಿದ್ದು, ಅವರು ಜಗತ್ತಿಗೆ ಹಿಂದೂ ಧರ್ಮದ ನಿಜವಾದ ಅರ್ಥವನ್ನು ತೋರಿಸಿದ್ದಾರೆ ಎಂದು ಹೇಳಿದೆ. ವೈವಿಧ್ಯತೆಯಲ್ಲಿ ಸಹಿಷ್ಣುತೆ ಮತ್ತು ಏಕತೆಯ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ.
Mohan Bhagawat
ಮೋಹನ್ ಭಾಗವತ್
Updated on

ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ವೈವಿಧ್ಯತೆ ಮತ್ತು ಧಾರ್ಮಿಕ ಸಹಬಾಳ್ವೆ ಕುರಿತು ನೀಡಿರುವ ಹೇಳಿಕೆಗಳಿಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಿಪಿಎಂ, ಎಐಎಂಐಎಂ ಮತ್ತು ಆರ್‌ಜೆಡಿ ನಾಯಕರು, ಭಾರತದಲ್ಲಿ ಇದೇ ಸಂದೇಶವನ್ನು ಏಕೆ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆದರೆ ಬಿಜೆಪಿ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ಸ್ವಾಗತಿಸಿದ್ದು, ಅವರು ಜಗತ್ತಿಗೆ ಹಿಂದೂ ಧರ್ಮದ ನಿಜವಾದ ಅರ್ಥವನ್ನು ತೋರಿಸಿದ್ದಾರೆ ಎಂದು ಹೇಳಿದೆ. ವೈವಿಧ್ಯತೆಯಲ್ಲಿ ಸಹಿಷ್ಣುತೆ ಮತ್ತು ಏಕತೆಯ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು ಹಾಗೂ ವಿವಿಧ ಧರ್ಮಗಳ ನಾಯಕರನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ವೈವಿಧ್ಯತೆಯಲ್ಲಿ ಏಕತೆ ಭಾರತದ ಡಿಎನ್‌ಎಯಲ್ಲೇ ಇದೆ ಎಂದು ಹೇಳಿದರು. ಇದನ್ನು ಸಂಭ್ರಮಿಸಬೇಕು, ಗೌರವಿಸಬೇಕು ಮತ್ತು ಒಪ್ಪಿಕೊಳ್ಳಬೇಕು ಎಂದರು.

Mohan Bhagawat
ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಭಾವಿಸುವ ಹಿಂದೂ ಹಿಂದೂವೇ ಅಲ್ಲ- ಅಮೆರಿಕದಲ್ಲಿ ಮೋಹನ್ ಭಾಗವತ್

ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಅವನು ಹಿಂದೂ ಆಗಿ ಉಳಿಯುವುದಿಲ್ಲ ಎಂದೂ ಭಾಗವತ್ ಹೇಳಿದರು.

ಈ ಹೇಳಿಕೆಗಳಿಗೆ ವಿಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹರಡುತ್ತಿದೆ ಎಂದು ಆರೋಪಿಸಲಾಗುತ್ತಿರುವ ಬಿಜೆಪಿ ನಾಯಕರು ಮತ್ತು ಸಂಘಟನೆಗಳಿಗೂ ಇದೇ ಸಂದೇಶವನ್ನು ಮೋಹನ್ ಭಾಗವತ್ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದವು.

ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ಮೋಹನ್ ಭಾಗವತ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರ ಹೇಳಿಕೆಗಳನ್ನು ಕೇಳಿದಾಗ ಮಾತನಾಡುತ್ತಿರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೋ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥರೋ ಎಂಬ ಅನುಮಾನ ಮೂಡಿದೆ ಎಂದರು. ವಿದೇಶದಲ್ಲಿ ಮೋಹನ್ ಭಾಗವತ್ ಅವರು ವೈವಿಧ್ಯತೆಯನ್ನು ಸ್ವೀಕರಿಸುವಂತೆ ಕಾಣಿಸಿಕೊಂಡರೂ, ಸ್ವದೇಶದಲ್ಲಿ ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಕಪಿಲ್ ಸಿಬಲ್ ಆರೋಪಿಸಿದರು.

ಕಾಂಗ್ರೆಸ್ ವಕ್ತಾರೆ ಶಾಮಾ ಮೊಹಮ್ಮದ್ ಅವರು ಭಾಗವತ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಆರ್‌ಎಸ್‌ಎಸ್‌ನ ಡಿಎನ್‌ಎ ದ್ವೇಷ ಮತ್ತು ಕೋಮುವಾದದಿಂದ ಕೂಡಿದೆ ಎಂದು ಆರೋಪಿಸಿದರು.

ಮೋಹನ್ ಭಾಗವತ್ ಅವರಿಗೆ ನನ್ನ ಪ್ರಶ್ನೆ: ಭಾರತದಲ್ಲಿ ಅವರು ಇದನ್ನು ಏಕೆ ಹೇಳುವುದಿಲ್ಲ? ಅವರ ಅಂಗಸಂಸ್ಥೆಗಳಾದ ವಿಎಚ್‌ಪಿ ಮತ್ತು ಭಜರಂಗದಳ ಪ್ರತಿದಿನ ಮುಸ್ಲಿಮರ ಮೇಲೆ ದಾಳಿ ಮಾಡುತ್ತಿವೆ. ಕ್ರಿಸ್‌ಮಸ್ ಆಚರಣೆಗಳ ಮೇಲೂ ದಾಳಿ ಮಾಡುತ್ತವೆ. ಬಿಜೆಪಿ ಸರ್ಕಾರಗಳು ಸರ್ಕಾರಿ ಯಂತ್ರಾಂಗವನ್ನು ಬಳಸಿ ಮುಸ್ಲಿಮರಿಗೆ ಕಿರುಕುಳ ನೀಡುತ್ತಿವೆ ಮತ್ತು ಅವರ ಮನೆಗಳನ್ನು ಬುಲ್ಡೋಜರ್ ಮಾಡಲಾಗುತ್ತಿದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದರು.

ಸುಳ್ಳು ಹೇಳುವುದನ್ನು ನಿಲ್ಲಿಸಿ, ಶ್ರೀ ಭಾಗವತ್. ಆರ್‌ಎಸ್‌ಎಸ್‌ನ ಡಿಎನ್‌ಎಯಲ್ಲಿ ಏನಿದೆ ಎಂಬುದು ನಮಗೆ ಗೊತ್ತು—ದ್ವೇಷ ಮತ್ತು ಕೋಮುವಾದ! ಎಂದು ಹೇಳಿದರು.

ಟಿಎಂಸಿ ಸಂಸದ ಸಾಗರಿಕಾ ಘೋಷ್ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ಭಯ ಹುಟ್ಟಿಸುವ ದ್ವಿಮುಖ ನೀತಿ ಎಂದು ಟೀಕಿಸಿದರು. ವಿದೇಶದಲ್ಲಿ ಅವರು ನೀಡುವ ಹೇಳಿಕೆಗಳು ಭಾರತದಲ್ಲಿನ ನಡೆ-ನುಡಿಗಳಲ್ಲೂ ಪ್ರತಿಬಿಂಬಿಸಬೇಕು ಎಂದು ಹೇಳಿದರು.

ಸಂಘ ಪರಿವಾರದ ಸಂಘಟನೆಗಳ ನಡೆ-ನುಡಿಗಳ ಕುರಿತು ಮೋಹನ್ ಭಾಗವತ್ ಮಾತನಾಡಬೇಕು ಎಂದು ಆಗ್ರಹಿಸಿದರು. ಭಜರಂಗದಳದ ಕಾರ್ಯಕರ್ತರು ಮುಸ್ಲಿಮರು ಮತ್ತು ಕ್ರೈಸ್ತರ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಮಸೀದಿಗಳ ಕೆಳಗೆ ದೇವಾಲಯಗಳಿವೆ ಎಂದು ವಿಎಚ್‌ಪಿ ನಿರಂತರವಾಗಿ ಪ್ರತಿಪಾದಿಸುತ್ತಿದೆ ಎಂದರು.

ಶ್ರೀರಾಮಸೇನೆ ಸೇರಿದಂತೆ ಹಿಂದುತ್ವ ಸಂಘಟನೆಗಳನ್ನೂ ಉಲ್ಲೇಖಿಸಿದ ಘೋಷ್, ಲೋಕಸಭೆಯಲ್ಲಿ ಬಿಜೆಪಿಗೆ ಒಬ್ಬ ಮುಸ್ಲಿಂ ಸಂಸದರೂ ಇಲ್ಲ ಎಂದು ಹೇಳಿದರು. ಬಿಜೆಪಿಯ ಕೆಲವು ಹಿರಿಯ ನಾಯಕರು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಭಾಗವತ್ ಅವರ ಹೇಳಿಕೆಗಳನ್ನು ಪ್ರಶ್ನಿಸಿದರು. ದೇಶದೊಳಗೆ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆರ್‌ಎಸ್‌ಎಸ್ ವಿಭಿನ್ನ ನಿಲುವುಗಳನ್ನು ಹೊಂದಿರುವುದು ಐತಿಹಾಸಿಕವಾಗಿ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.

ಇದು ಆರ್‌ಎಸ್‌ಎಸ್‌ನ ಹಳೆಯ ತಂತ್ರ: ಜಗತ್ತಿಗಾಗಿ ಕೆಲವು ಮಾತುಗಳು, ತನ್ನ ಸದಸ್ಯರಿಗಾಗಿ ಕೆಲವು ಮಾತುಗಳು ಎಂದು ಓವೈಸಿ ಹೇಳಿದರು.

ಆರ್‌ಎಸ್‌ಎಸ್‌ನ ಪ್ರಮುಖ ಚಿಂತಕರ ಬರಹಗಳನ್ನು ಸಂಘಟನೆ ಎಂದಿಗೂ ಏಕೆ ತಿರಸ್ಕರಿಸಿಲ್ಲ ಎಂದು ಅವರು ಪ್ರಶ್ನಿಸಿದರು. ಸಂಘಟನೆ ಪ್ರಜಾಪ್ರಭುತ್ವವನ್ನು ವಿರೋಧಿಸಿದ್ದು, ಸರ್ವಾಧಿಕಾರವನ್ನು ಬೆಂಬಲಿಸುತ್ತಾ ಬಂದಿದೆ ಎಂದು ಆರೋಪಿಸಿದರು.

ಎಂ.ಎಸ್. ಗೋಲ್ವಾಲ್ಕರ್ ಅವರ Bunch of Thoughts ಕೃತಿಯಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರನ್ನು ಕ್ರಮವಾಗಿ ಮೊದಲ ಮತ್ತು ಎರಡನೇ “ಆಂತರಿಕ ಬೆದರಿಕೆಗಳು” ಎಂದು ಉಲ್ಲೇಖಿಸಲಾಗಿದೆ ಎಂದು ಓವೈಸಿ ಹೇಳಿದರು.

ಮೋಹನ್ ಅವರಿಗೆ ನನ್ನ ಮನವಿ ಏನೆಂದರೆ, ಸಾವರ್ಕರ್, ಹೆಡ್ಗೆವಾರ್, ಗೋಲ್ವಾಲ್ಕರ್ ಮತ್ತಿತರರ ವಿಷಪೂರಿತ ಕೃತಿಗಳ ಆಯ್ದ ಭಾಗಗಳನ್ನು ಅವರು ಓದಲಿ. ಆರ್‌ಎಸ್‌ಎಸ್ ಬಗ್ಗೆ ಜನರು ತಾವೇ ನಿರ್ಧರಿಸಲಿ ಎಂದು ಓವೈಸಿ ಹೇಳಿದರು.

ಸಿಪಿಐಎಂ ನಾಯಕ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ನೀಡಿದ ಹೇಳಿಕೆಗಳನ್ನು ಟೀಕಿಸಿದರು.

ಆಮ್ ಆದ್ಮಿ ಪಕ್ಷದ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್, ಮೋಹನ್ ಭಾಗವತ್ ಅವರು ತಮ್ಮ ವೈವಿಧ್ಯತೆಯ ಸಂದೇಶವನ್ನು ಬಿಜೆಪಿ ಮುಖ್ಯಮಂತ್ರಿಗಳು ಮತ್ತು ನಾಯಕರಿಗೆ, ಅದರಲ್ಲೂ ಹಿಮಂತ ಬಿಸ್ವ ಶರ್ಮಾ, ಯೋಗಿ ಆದಿತ್ಯನಾಥ್ ಹಾಗೂ ಸುವೇಂದು ಅಧಿಕಾರಿ ಅವರಿಗೆ ತಿಳಿಸಬೇಕು ಎಂದು ಹೇಳಿದರು.

ಅನುರಾಗ್ ಠಾಕೂರ್ ಮತ್ತು ಕಪಿಲ್ ಮಿಶ್ರಾ ಅವರಂತಹ ಬಿಜೆಪಿ ನಾಯಕರ ಹೆಸರನ್ನೂ ಉಲ್ಲೇಖಿಸಿದ ಅವರು, ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹರಡುವಂತಹ ಹೇಳಿಕೆಗಳನ್ನು ಅವರು ನೀಡಿದ್ದಾರೆ ಎಂದು ಆರೋಪಿಸಿದರು.

ಮೋಹನ್ ಭಾಗವತ್ ಅವರ ಮನಸ್ಸಿನಲ್ಲಿ ನಿಜವಾಗಿಯೂ ಬದಲಾವಣೆಯಾಗಿದ್ದರೆ, ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಭಾರದ್ವಾಜ್ ಹೇಳಿದರು.

ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಕೂಡ ಭಾಗವತ್ ಅವರು ಇಂತಹ ಹೇಳಿಕೆಗಳನ್ನು ಅಮೆರಿಕದಲ್ಲಿ ನೀಡುವ ಬದಲು ಭಾರತದಲ್ಲೇ ನೀಡಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com