

ದೆಹಲಿ: ಒಂದೆಡೆ ಬಿಜೆಪಿ ತನ್ನ ಮುಂದಿನ ಪೀಳಿಗೆಯ ನಾಯಕರನ್ನು ನಿರ್ಮಿಸುತ್ತಿದೆ. ರಾಜಕೀಯ ತರಬೇತಿಗಾಗಿ 25-40 ವರ್ಷ ವಯಸ್ಸಿನ 1,000 ಕ್ಕೂ ಹೆಚ್ಚು ಭಾರತೀಯರನ್ನು ಬಿಜೆಪಿ ಆಯ್ಕೆ ಮಾಡುತ್ತಿದೆ.
ಯುವಕರನ್ನು ಮುಖ್ಯವಾಹಿನಿಗೆ ತರುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಬೆಂಬಲಿಸುವ ಮೂಲಕ, ಪಕ್ಷವು ಯುವಕರನ್ನು ಸೇರಿಸಿಕೊಳ್ಳುವ ಮೊದಲು ಮೂರು ವರ್ಷಗಳ ಕಾಲ ಅವರಿಗೆ ಮಾರ್ಗದರ್ಶನ ನೀಡುತ್ತದೆ.
ಬಿಜೆಪಿ ಯುವ ಕೇಂದ್ರಿತವಾಗಿರಲು ಬಯಸುತ್ತದೆ, ಭವಿಷ್ಯಕ್ಕಾಗಿ ಅರ್ಹ ಮತ್ತು ಕ್ರಿಯಾತ್ಮಕ ನಾಯಕರನ್ನು ಸಿದ್ಧಪಡಿಸುವುದುಪಕ್ಷದ ಪ್ರಮುಖ ಗುರಿಯಾಗಿದೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ. ಮಾರ್ಗದರ್ಶನದ ನಂತರ, 150–200 ಜನರು ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಿಗೆ ಸೇರುತ್ತಾರೆ, 250–300 ಜನರು ಮೋರ್ಚಾಗಳು ಮತ್ತಿತರ ಕಡೆ ಕೆಲಸ ಮಾಡುತ್ತಾರೆ.
ಸುಮಾರು 500 ಜನರನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲಾಗುತ್ತದೆ. ನಿತಿನ್ ನಬಿನ್ ರಾಷ್ಟ್ರೀಯ ಅಧ್ಯಕ್ಷರಾದ ನಂತರ, ಉತ್ತರ ಪ್ರದೇಶದಿಂದ 110, ಬಿಹಾರದಿಂದ 70, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ತಲಾ 50–60 ಮತ್ತು ಸಣ್ಣ ರಾಜ್ಯಗಳಿಂದ 15–20 ಜನರು ಸೇರಿದ್ದಾರೆ.
ಇನ್ನೂ ಮತ್ತೊಂದೆಡೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಗ ನಿಶಾಂತ್ ಕುಮಾರ್ ಚುನಾವಣಾ ರಾಜಕೀಯಕ್ಕೆ ಕಾಲಿಡಬಹುದು ಎಂಬ ಮಾತು ಕೇಳಿಬರುತ್ತಿದೆ. ಇದಕ್ಕಾಗಿ ಜೆಡಿ(ಯು) ವೇದಿಕೆ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹೋಳಿ ಹಬ್ಬದ ನಂತರ ಮತ್ತು ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರು ಬಂದ ನಂತರ ಪ್ರಮುಖ ಪದಾಧಿಕಾರಿ ಹುದ್ದೆ ನೀಡುವ ಸಾಧ್ಯತೆಯಿದೆ.
ಇದೀಗ, ಸಂಜಯ್ ಕುಮಾರ್ ಝಾ ಅವರು ಕಾರ್ಯನಿರತ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಆರ್‌ಸಿಪಿ ಸಿಂಗ್ ಪಕ್ಷಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ನಿತೀಶ್ ಅವರ ವಿಶ್ವಾಸಾರ್ಹ ಸಹಾಯಕರಾಗಿದ್ದ ಸಿಂಗ್ ಹೋಳಿ ಹಬ್ಬದ ನಂತರ ಮರಳುವುದನ್ನು ಕುತೂಹಲದಿಂದ ವೀಕ್ಷಿಸಲಾಗುತ್ತಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಚಡಪಡಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಬಯಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ಕೇಂದ್ರ ನಾಯಕರ ಮನಸ್ಥಿತಿಯನ್ನು ಅರಿತುಕೊಳ್ಳಲು ದೆಹಲಿಗೆ ತಮ್ಮ ಬೆಂಬಲಿಗರನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ನಿರ್ಧಾರವು ಚುನಾವಣೆಯ ನಂತರವೇ ಬರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟವಾಗಿ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತದೆ. ಆರಂಭದಲ್ಲೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವುದರಿಂದ ಆ ವ್ಯಕ್ತಿಯನ್ನು ಆಕರ್ಷಣೆಯ ಕೇಂದ್ರಬಿಂದುವಾಗಿ ಪರಿವರ್ತಿಸಬಹುದು ಎಂಬುದು ಪಕ್ಷದ ಅಭಿಪ್ರಾಯವಾಗಿದೆ.
Advertisement