

ಮುಂಬೈ: ವಯಸ್ಸಿನ ಹೊರತಾಗಿಯೂ ಕೆಲಸ ಮಾಡುವುದನ್ನು ಮುಂದುವರಿಸುವಂತೆ ಸಂಘವು ಸೂಚಿಸಿದೆ. ಆದರೆ, ಸಂಘಟನೆಯು ನನಗೆ ನಿರ್ದೇಶನ ನೀಡಿದ ದಿನವೇ ಈ ಹುದ್ದೆಯಿಂದ ಕೆಳಗಿಳಿಯುತ್ತೇನೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂವಾದದ ಅವಧಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, 'ಆರ್‌ಎಸ್‌ಎಸ್ ಮುಖ್ಯಸ್ಥರ ಹುದ್ದೆಗೆ ಯಾವುದೇ ಚುನಾವಣೆ ನಡೆಯುವುದಿಲ್ಲ. ಪ್ರಾದೇಶಿಕ ಮತ್ತು ವಿಭಾಗೀಯ ಮುಖ್ಯಸ್ಥರು ಮುಖ್ಯಸ್ಥರನ್ನು ನೇಮಿಸುತ್ತಾರೆ. ಸಾಮಾನ್ಯವಾಗಿ 75 ವರ್ಷ ತುಂಬಿದ ನಂತರ ಯಾವುದೇ ಹುದ್ದೆಯನ್ನು ಅಲಂಕರಿಸದೆ ಕೆಲಸ ಮಾಡಬೇಕು ಎಂದು ಹೇಳಲಾಗುತ್ತದೆ' ಎಂದರು.
'ನನಗೆ 75 ವರ್ಷ ವಯಸ್ಸಾಗಿದೆ ಮತ್ತು ಈ ಬಗ್ಗೆ ಆರ್‌ಎಸ್‌ಎಸ್‌ಗೆ ತಿಳಿಸಿದ್ದೇನೆ. ಆದರೆ, ಸಂಘಟನೆಯು ನನ್ನನ್ನು ಕೆಲಸ ಮಾಡುವಂತೆ ಸೂಚಿಸಿದೆ. ಸಂಘವು ನನಗೆ ಸೂಚಿಸಿದ ಮರುಕ್ಷಣವೇ ನಾನು ಈ ಹುದ್ದೆಯಿಂದ ಕೆಳಗಿಳಿಯುತ್ತೇನೆ. ಆದರೆ, ಕೆಲಸದಿಂದ ನಿವೃತ್ತಿ ಎಂದಿಗೂ ಸಂಭವಿಸುವುದಿಲ್ಲ' ಎಂದು ಹೇಳಿದರು.
'ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು ಪರಿಹಾರಗಳನ್ನು ಕಂಡುಹಿಡಿಯುವುದು ಹೇಗೆ ಎಂದು ನಾವು ಯೋಚಿಸಬೇಕು. ಎಲ್ಲಿಯವರೆಗೆ ಸತ್ಯವು ಮುಂದೆ ಬರುವುದಿಲ್ಲವೋ ಅಲ್ಲಿಯವರೆಗೆ ಭ್ರಮೆಯು ಪರಿಣಾಮಕಾರಿಯಾಗಿರುತ್ತದೆ' ಎಂದು ತಿಳಿಸಿದರು.
'ಸಂಘಟನೆಯು ತನ್ನ ಸ್ವಯಂಸೇವಕರಿಂದ ಕಷ್ಟಪಟ್ಟು ಕೆಲಸ ಮಾಡಿಸುತ್ತದೆ ಮತ್ತು ಅತ್ಯುತ್ತಮ ಪ್ರಯತ್ನ ಮಾಡಲು ಅವರನ್ನು ಒತ್ತಾಯಿಸುತ್ತದೆ. ಆರ್‌ಎಸ್‌ಎಸ್ ಇತಿಹಾಸದಲ್ಲಿ ಯಾರಾದರೂ ನಿವೃತ್ತಿಯಾಗಿರುವ ಅಥವಾ ವಜಾಗೊಳಿಸಿರುವ ಉದಾಹರಣೆಗಳಿಲ್ಲ. ಸಂಘದ ಕೆಲಸವು 'ಸಂಸ್ಕಾರ' ಬೆಳೆಸುವುದು ಮತ್ತು ಪ್ರಚಾರ ಮಾಡುವುದಲ್ಲ' ಎಂದು ಭಾಗವತ್ ಹೇಳಿದರು.
'ನಾವು ನಮ್ಮನ್ನು ನಾವು ಪ್ರಚಾರ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ. ಅತಿಯಾದ ಪ್ರಚಾರವು ಜನಪ್ರಿಯತೆಗೆ ಮತ್ತು ನಂತರ ದುರಹಂಕಾರಕ್ಕೆ ಕಾರಣವಾಗುತ್ತದೆ. ಇದರಿಂದ ಒಬ್ಬನು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಪ್ರಚಾರವು ಮಳೆಯಂತಿರಬೇಕು, ಸಮಯ ಮತ್ತು ಪ್ರಮಾಣದಲ್ಲಿ ಸಮರ್ಪಕವಾಗಿರಬೇಕು' ಎಂದು ಅವರು ಹೇಳಿದರು.
ಆರೆಸ್ಸೆಸ್ ಕಾರ್ಯನಿರ್ವಹಣೆಯಲ್ಲಿ ಇಂಗ್ಲಿಷ್ ಎಂದಿಗೂ ಸಂವಹನ ಮಾಧ್ಯಮವಾಗುವುದಿಲ್ಲ, ಏಕೆಂದರೆ ಅದು ಭಾರತೀಯ ಭಾಷೆಯಲ್ಲ ಎಂದು ಭಾಗವತ್ ಹೇಳಿದರು.
ನಾವು ಭಾರತೀಯರೊಂದಿಗೆ ಕೆಲಸ ಮಾಡಲು ಬಯಸುತ್ತೇವೆ. ಇಂಗ್ಲಿಷ್ ಅಗತ್ಯವಿರುವಲ್ಲೆಲ್ಲ ನಾವು ಅದನ್ನು ಬಳಸುತ್ತೇವೆ. ನಾವು ಅದಕ್ಕೆ ವಿಮುಖರಾಗುವುದಿಲ್ಲ. ಜನರು ಇಂಗ್ಲಿಷ್ ಮಾತನಾಡಬೇಕು. ಆಗ ಇಂಗ್ಲೀಷ್ ಭಾಷಿಕರಿಗೆ ಅರ್ಥವಾಗುತ್ತದೆ. ನಾವು ಇಂಗ್ಲಿಷ್ ಅನ್ನು ಕರಗತ ಮಾಡಿಕೊಳ್ಳಬೇಕು. ಆದರೆ, ನಾವು ನಮ್ಮ ಮಾತೃಭಾಷೆಯನ್ನು ಮರೆತುಬಿಡಬೇಕು ಎಂದರ್ಥವಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಇದೇ ರೀತಿಯ ಸಂವಾದವನ್ನು ನೆನಪಿಸಿಕೊಂಡ ಅವರು, ದಕ್ಷಿಣದ ಹಲವಾರು ರಾಜ್ಯಗಳ ಪ್ರತಿನಿಧಿಗಳಿಗೆ ಹಿಂದಿ ಅರ್ಥವಾಗುವುದಿಲ್ಲ. ಹೀಗಾಗಿ, ನಾನು ಅವರ ಪ್ರಶ್ನೆಗಳಿಗೆ ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯಿಸಿದೆ. ವಿದೇಶದಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಹನ ನಡೆಸುವಾಗ, ಅವರು ಇಂಗ್ಲಿಷ್ ಮಾತನಾಡುವ ಅಥವಾ ಇಂಗ್ಲಿಷ್ ಮಾತನಾಡದವರೇ ಎಂಬುದನ್ನು ಅವಲಂಬಿಸಿ ಹಿಂದಿ ಅಥವಾ ಮಾತೃಭಾಷೆಯಲ್ಲಿ ಸಂವಹನ ನಡೆಸಲಾಗಿದೆ ಎಂದು ಹೇಳಿದರು.
Advertisement