

ಚಂಡಿಗಢ: ಹರಿಯಾಣದ ಸೂರಜ್‌ಕುಂಡ್ ಅಂತರರಾಷ್ಟ್ರೀಯ ಕರಕುಶಲ ಮೇಳದಲ್ಲಿ ಸಂಭವಿಸಿದ ಸ್ವಿಂಗ್ ದುರಂತ ಪ್ರಕರಣದಲ್ಲಿ ರಕ್ಷಣೆಗೆ ತೆರಳಿದ್ದ ಇನ್ಸ್ ಪೆಕ್ಟರ್ ದುರಂತ ಸಾವನ್ನಪ್ಪಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಸ್ವಿಂಗ್ ಮಾಲೀಕ ಮತ್ತು ಆಪರೇಟರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಸೂರಜ್‌ಕುಂಡ್ ಮೇಳದಲ್ಲಿ ನಿಯೋಜಿಸಲ್ಪಟ್ಟಿದ್ದ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ (58), ಗಾಯಗೊಂಡ ಜನರನ್ನು ರಕ್ಷಿಸಲು ಮುಂದಾದಾಗ ಉಯ್ಯಾಲೆ ಅವರ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇವರೊಟ್ಟಿಗೆ ಇತರೆ ಹನ್ನೆರಡು ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ದುರಂತದ ಸಂದರ್ಭದಲ್ಲಿ ಸುಮಾರು 19 ಜನರು ತೂಗುಯ್ಯಾಲೆಯ ಮೇಲೆ ಇದ್ದರು, ಅದು ಸಂಜೆ ಸುಮಾರು 6 ಗಂಟೆಗೆ ಒಂದು ಬದಿಯಿಂದ ಓರೆಯಾಗಿ ಜಾರಿತು. ಈ ವೇಳೆ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಮತ್ತು ಇತರ ಪೊಲೀಸ್ ಸಿಬ್ಬಂದಿ ಸಿಕ್ಕಿಬಿದ್ದವರನ್ನು ರಕ್ಷಿಸಲು ಧಾವಿಸಿದರು. ರಕ್ಷಣಾ ಕಾರ್ಯ ನಡೆಯುತ್ತಿರುವಾಗ, ಇನ್ನೊಂದು ಬದಿಯಿಂದ ತೂಗುಯ್ಯಾಲೆ ಬಿದ್ದು ರಕ್ಷಣಾ ಸಿಬ್ಬಂದಿಯ ಮೇಲೆ ಕುಸಿದು ಗಂಭೀರ ಗಾಯಗಳಾಗಿದ್ದವು.
ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇನ್ಸ್‌ಪೆಕ್ಟರ್ ಪ್ರಸಾದ್ ಗಂಭೀರವಾಗಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಸಹಾಯಕ ಸಬ್-ಇನ್‌ಸ್ಪೆಕ್ಟರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸ್ವಿಂಗ್ ಆಪರೇಟರ್ ಮತ್ತು ಅವರ ಸಿಬ್ಬಂದಿಯ ಸಂಪೂರ್ಣ ನಿರ್ಲಕ್ಷ್ಯ ಮತ್ತು ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಕಾರಣ ಈ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾಲೀಕ-ಆಪರೇಟರ್ ಬಂಧನ
ಪೊಲೀಸ್ ತನಿಖೆಯಲ್ಲಿ ಇಬ್ಬರು ಆರೋಪಿಗಳನ್ನು ಹರಿಯಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಮೇಳದಲ್ಲಿ ರೈಡ್ ಅಳವಡಿಸಿದ ಹಿಮಾಚಲ ಫನ್ ಕೇರ್ ಕಂಪನಿಯ ಮಾಲೀಕ ಮೊಹಮ್ಮದ್ ಶಕೀರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ದುರಂತದ ಕುರಿತು ನಡೆದ ಪೊಲೀಸ್ ತನಿಖೆಯಲ್ಲಿ ಉಯ್ಯಾಲೆ ಆಪರೇಟಿಂಗ್ ಕಂಪನಿಯ ಮಾಲೀಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಹರಿಯಾಣಾ ಪೊಲೀಸರು ಬಂಧಿಸಿದ್ದಾರೆ. ಸೂರಜ್‌ಕುಂಡ್ ಮೇಳದಲ್ಲಿ ನಿಯೋಜಿಸಲ್ಪಟ್ಟಿದ್ದ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್, ಗಾಯಗೊಂಡ ಜನರನ್ನು ರಕ್ಷಿಸಲು ಮುಂದಾದಾಗ ಉಯ್ಯಾಲೆ ಅವರ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇವರೊಟ್ಟಿಗೆ ಇತರೆ ಹನ್ನೆರಡು ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
ಎಫ್‌ಐಆರ್ ದಾಖಲು
ಮೇಳದಲ್ಲಿ ರೈಡ್ ಅಳವಡಿಸಿದ ಹಿಮಾಚಲ ಫನ್ ಕೇರ್ ಕಂಪನಿಯ ಮಾಲೀಕ ಮೊಹಮ್ಮದ್ ಶಕೀರ್ನನ್ನು ಪೊಲೀಸರು ಬಂಧಿಸಿದ್ದಾರೆ. ಇತನು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ನಿವಾಸಿಯಾಗಿದ್ದು, ಇವನು ಮುರಿದು ಬಿದ್ದ ಉಯ್ಯಾಲೆಯ ಮಾಲೀಕನಾಗಿದ್ದಾನೆ.
ಉಯ್ಯಾಲೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುತ್ತಿದ್ದ, ಉತ್ತರ ಪ್ರದೇಶದ ಮೀರತ್ ಕಂಟೋನ್ಮೆಂಟ್ ನಿವಾಸಿ ನಿತೇಶ್ ಎಂಬ ಮತ್ತೊಬ್ಬ ಆರೋಪಿಯನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಈ ದುರ್ಘಟನೆ ಹೇಗೆ ನಡೆಯಿತು ಮತ್ತು ಅದರಲ್ಲಿ ಇವರಿಬ್ಬರ ಪಾತ್ರವೇನು ಎಂಬ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ತಂಡ ರಚನೆ
ಇನ್ನು ಈ ದುರಂತದ ತನಿಖೆಗೆ ಡಿಸಿಪಿ (ಅಪರಾಧ) ಮುಖೇಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಅಪರಾಧ ವಿಭಾಗದ ಎನ್‌ಐಟಿಯ ಉಸ್ತುವಾರಿ ಎಸಿಪಿ (ಅಪರಾಧ) ವರುಣ್ ದಹಿಯಾ ಮತ್ತು ಸೂರಜ್‌ಕುಂಡ್ ಪೊಲೀಸ್ ಠಾಣೆಯ ಸಬ್-ಇನ್‌ಸ್ಪೆಕ್ಟರ್ ಸಂಜಯ್ ಕುಮಾರ್ ಸದಸ್ಯರಾಗಿದ್ದಾರೆ. ಸುರಕ್ಷತಾ ಅನುಸರಣೆ, ಜವಾಬ್ದಾರಿ ಮತ್ತು ಸಂಭವನೀಯ ನಿರ್ಲಕ್ಷ್ಯ ಸೇರಿದಂತೆ ಘಟನೆಯ ಎಲ್ಲಾ ಅಂಶಗಳನ್ನು ಎಸ್‌ಐಟಿ ಪರಿಶೀಲಿಸುತ್ತದೆ. ಇದರ ಜೊತೆಗೆ, ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಪ್ರತ್ಯೇಕ ಆಡಳಿತಾತ್ಮಕ ತನಿಖೆ ನಡೆಸಲಿದೆ.
ಏತನ್ಮಧ್ಯೆ, 39 ನೇ ಸೂರಜ್‌ಕುಂಡ್ ಅಂತರರಾಷ್ಟ್ರೀಯ ಕರಕುಶಲ ಉತ್ಸವ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ, ಆದರೂ ತನಿಖೆಯ ಫಲಿತಾಂಶ ಬರುವವರೆಗೂ ಇಡೀ ಸ್ವಿಂಗ್ ಪ್ರದೇಶವನ್ನು ಮುಚ್ಚಲಾಗಿದೆ.
ಸರ್ಕಾರಿ ಗೌರವಗಳೊಂದಿಗೆ 'ಹೀರೋ ಇನ್ಸ್ ಪೆಕ್ಟರ್' ಅಂತ್ಯ ಸಂಸ್ಕಾರ
ಸೂರಜ್‌ಕುಂಡ್ ಜಾತ್ರೆಯ ಮೈದಾನದಲ್ಲಿ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಉಯ್ಯಾಲೆ ಕುಸಿದು ಬಿದ್ದು ಸಾವನ್ನಪ್ಪಿದ 58 ವರ್ಷದ ಹರಿಯಾಣ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಅವರನ್ನು ಭಾನುವಾರ ಉತ್ತರ ಪ್ರದೇಶದ ಅವರ ಹುಟ್ಟೂರು ಡೆಂಗಾರ್ ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಯಮುನಾ ನದಿಯ ದಡದಲ್ಲಿ ಅವರ ಅಂತ್ಯಕ್ರಿಯೆಯನ್ನು ಪೂರ್ಣ ವಿಧಿವಿಧಾನಗಳೊಂದಿಗೆ ನಡೆಸಲಾಯಿತು, ಅಲ್ಲಿ ಅವರ ಮಗ ಗೌರವ್ ಅಂತ್ಯಕ್ರಿಯೆಯ ಚಿತೆಗೆ ಬೆಂಕಿ ಹಚ್ಚಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಅಂತ್ಯಕ್ರಿಯೆಗಾಗಿ ನೂರಾರು ಜನರು ಸೇರಿದ್ದರು.
Advertisement