'ನನ್ನ ವಿರುದ್ಧ ಹಕ್ಕುಚ್ಯುತಿ ಉಲ್ಲಂಘನೆ ನೊಟೀಸ್ ಜಾರಿ ಮಾಡಿ, ಆದರೆ ರೈತರ ಪರ ಹೋರಾಟ ನಿಲ್ಲಿಸುವುದಿಲ್ಲ': ರಾಹುಲ್ ಗಾಂಧಿ; Video

ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದಕ್ಕೆ ತಮ್ಮ ವಿರೋಧವನ್ನು ರಾಹುಲ್ ಗಾಂಧಿ ಪುನರುಚ್ಚರಿಸಿ, ಇದು ಭಾರತದ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು.
Rahul Gandhi
ರಾಹುಲ್ ಗಾಂಧಿ
Updated on

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಮೋದಿ ಸರ್ಕಾರದ ವಿರುದ್ಧ ತಮ್ಮ ಟೀಕಾಪ್ರಹಾರ ತೀವ್ರಗೊಳಿಸಿದ್ದಾರೆ. ಯಾವುದೇ ಎಫ್‌ಐಆರ್, ಕ್ರಿಮಿನಲ್ ಪ್ರಕರಣ ಅಥವಾ ವಿಶೇಷ ಹಕ್ಕು ಉಲ್ಲಂಘನೆ ನೊಟೀಸ್ ನೀಡಿದರೂ ತಮ್ಮ ಹೋರಾಟದಿಂದ ತಾವು ಹಿಂದೆ ಸರಿಯುವುದಿಲ್ಲ, ರೈತರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

‘ಎಕ್ಸ್’ನಲ್ಲಿ ಹಂಚಿಕೊಂಡ ವಿಡಿಯೋ ಸಂದೇಶದಲ್ಲಿ, ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದಕ್ಕೆ ತಮ್ಮ ವಿರೋಧವನ್ನು ರಾಹುಲ್ ಗಾಂಧಿ ಪುನರುಚ್ಚರಿಸಿ, ಇದು ಭಾರತದ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು. ದೇಶೀಯ ಉತ್ಪಾದಕರ ಹಿತಾಸಕ್ತಿಯನ್ನು ಕಡೆಗಣಿಸಿ, ಪ್ರಧಾನಿ ನರೇಂದ್ರ ಮೋದಿ ಭಾರತ ಕೃಷಿ ಮಾರುಕಟ್ಟೆಯ ಬಾಗಿಲನ್ನು ವಿದೇಶಿ ಕಂಪನಿಗಳಿಗೆ ತೆರೆದಿದ್ದಾರೆ ಎಂದು ಆರೋಪಿಸಿದರು.

ನಾನು ಸಂಸತ್ತಿನಲ್ಲಿ ಸತ್ಯವನ್ನು ಹೇಳಿದ್ದೇನೆ. ನಿಮಗೆ ಸತ್ಯ ಇಷ್ಟವಾಗದಿದ್ದರೆ ಅದು ಬೇರೆ ವಿಷಯ. ದೇಶಕ್ಕೆ ಸತ್ಯ ಗೊತ್ತಿದೆ. ನೀವು ಏನು ಬೇಕಾದರೂ ಮಾಡಿ. ಎಫ್‌ಐಆರ್ ದಾಖಲಿಸಿ, ಪ್ರಕರಣ ದಾಖಲಿಸಿ ಅಥವಾ ವಿಶೇಷ ಹಕ್ಕು ಉಲ್ಲಂಘನೆ ನೊಟೀಸ್ ತರಲಿ. ನಾನು ಮತ್ತು ನಮ್ಮ ಪಕ್ಷ ಸಂಪೂರ್ಣವಾಗಿ ರೈತರ ಜೊತೆಯಲ್ಲಿದ್ದೇವೆ ಎಂದರು.

ರೈತರ ಜೀವನೋಪಾಯಕ್ಕೆ ಧಕ್ಕೆಯುಂಟುಮಾಡುವ, ದೇಶದ ಆಹಾರ ಭದ್ರತೆಯನ್ನು ದುರ್ಬಲಗೊಳಿಸುವ ಯಾವುದೇ ವ್ಯಾಪಾರ ಒಪ್ಪಂದವು ರೈತ ವಿರೋಧಿಯಾಗಿದೆ. ಜೋಳ, ಸೋಯಾಬೀನ್, ಹತ್ತಿ ಮತ್ತು ಹಣ್ಣು ಬೆಳೆಗಾರರು ಮೊದಲಿಗೆ ಹೊಡೆತ ಅನುಭವಿಸಲಿದ್ದಾರೆ. ಸರ್ಕಾರ ಕೊನೆಯಲ್ಲಿ ಸಂಪೂರ್ಣ ಕೃಷಿ ಕ್ಷೇತ್ರವನ್ನು ವಿದೇಶಿ ಹಿತಾಸಕ್ತಿಗಳು ಮತ್ತು ಕಾರ್ಪೊರೇಟ್ ಮಿತ್ರರಿಗೆ ತೆರೆಯಲಿದೆ ಎಂದು ಆರೋಪಿಸಿದರು.

ಬಿಜೆಪಿ ಸಂಸದ ದುಬೆ ಆರೋಪವೇನು?

ರಾಹುಲ್ ಗಾಂಧಿಯವರ ಹೇಳಿಕೆಗಳ ಬಳಿಕ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ರಾಹುಲ್ ಗಾಂಧಿಯವರ ಸಂಸದೀಯ ಸದಸ್ಯತ್ವವನ್ನು ರದ್ದುಪಡಿಸಿ, ಅವರಿಗೆ ಜೀವನಪೂರ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧ ಹೇರಬೇಕು ಎಂದು ಬೇಡಿಕೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ವಿದೇಶ ಪ್ರವಾಸಗಳ ವೇಳೆ ರಾಹುಲ್ ಗಾಂಧಿ ಭಾರತ ವಿರೋಧಿ ಅಂಶಗಳು ಮತ್ತು ವಿದೇಶಿ ಸಂಸ್ಥೆಗಳೊಂದಿಗೆ ಸಂಚು ನಡೆಸಿದ್ದಾರೆ ಎಂದು ದುಬೆ ತಮ್ಮ ನೋಟಿಸ್‌ನಲ್ಲಿ ಆರೋಪಿಸಿದ್ದಾರೆ.

ಆದರೆ, ಈ ವಿಷಯದಲ್ಲಿ ಯಾವುದೇ ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್ (Privilege Motion) ಸಲ್ಲಿಸಲಾಗಿಲ್ಲ ಎಂದು ದುಬೆ ಸ್ಪಷ್ಟಪಡಿಸಿದರು.

ನಮ್ಮ ದೇಶದ ಯಾವುದೇ ನಾಗರಿಕ ಅಥವಾ ಸಾರ್ವಜನಿಕ ಪ್ರತಿನಿಧಿ/ಉನ್ನತ ಅಧಿಕಾರಿಗಳು ಸಶಸ್ತ್ರ ಪಡೆಗಳ ಗೌರವಕ್ಕೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ವರ್ತಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಪಕ್ಷಭೇದವಿಲ್ಲದೆ ಎಲ್ಲಾ ಸಂಸದರೂ ರಾಜಕೀಯ ಲಾಭಕ್ಕಾಗಿ ಸಶಸ್ತ್ರ ಪಡೆಗಳನ್ನು ಅಥವಾ ಅದರ ಅಧಿಕಾರಿಗಳನ್ನು ಒಳಗೆಳೆಯಬಾರದು ಎಂಬ ಒಂದು ಅಪ್ರಕಟಿತ ಒಪ್ಪಂದವಿದೆ. ಆದರೆ ಈ ನೈತಿಕ ಮೌಲ್ಯಗಳನ್ನು ರಾಹುಲ್ ಗಾಂಧಿ ಧಿಕ್ಕರಿಸುತ್ತಿದ್ದಾರೆ ಎಂಬುದು ಲೋಕಸಭೆಯಲ್ಲಿ ಅವರು ಮಾಡಿದ ಭಾಷಣದಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಖುಂದ್ ನರವಾಣೆ ಅವರ ಹೆಸರನ್ನು ಉಲ್ಲೇಖಿಸಿರುವುದರಿಂದ ಸ್ಪಷ್ಟವಾಗುತ್ತದೆ ಎಂದು ದುಬೆ ಹೇಳಿದ್ದಾರೆ.

Rahul Gandhi
ರಾಹುಲ್ ವಿರುದ್ಧ ಸರ್ಕಾರ ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇಲ್ಲ, ಆದರೆ...

ಸಂಸದರಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿಯೂ ರಾಹುಲ್ ಗಾಂಧಿಯವರ “ಅನೈತಿಕ ವರ್ತನೆ” ಕುರಿತು ತುರ್ತು ಮತ್ತು ಸಂರಚಿತ ತನಿಖೆ ನಡೆಸಿ, ಅವರನ್ನು ಲೋಕಸಭೆಯಿಂದ ತಕ್ಷಣ ವಜಾಗೊಳಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿ ಆರೋಪವೇನು?

ಭಾರತ–ಅಮೆರಿಕಾ ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದ ನಂತರ ನಡೆದಿದೆ. ರೈತರ ಹಿತಾಸಕ್ತಿಯನ್ನು ಹಾನಿಗೊಳಿಸಿ, ವಸ್ತ್ರೋದ್ಯಮಕ್ಕೆ ಹೊಡೆತ ನೀಡಿದ್ದು ಹಾಗೂ ಭಾರತದ ಇಂಧನ ಭದ್ರತೆಯನ್ನು ದುರ್ಬಲಗೊಳಿಸುವ ಮೂಲಕ ಪ್ರಧಾನಿ ಮೋದಿ “ದೇಶವನ್ನು ಮಾರಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಇದಕ್ಕೂ ಮೊದಲು ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸದನವನ್ನು ತಪ್ಪು ದಾರಿಗೆಳೆದುದಾಗಿ ಆರೋಪಿಸಿ ರಾಹುಲ್ ಗಾಂಧಿ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆ ನೊಟೀಸ್ ತರಲಾಗುತ್ತದೆ ಎಂದು ಹೇಳಿದ್ದರು. ಆದರೆ ನಂತರ ಸರ್ಕಾರವು ಅದನ್ನು ಮುಂದುವರಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕಾದಲ್ಲಿ ದೊಡ್ಡ ಪ್ರಮಾಣದ ಯಾಂತ್ರೀಕೃತ ಕೃಷಿ ಮತ್ತು ಹೆಚ್ಚಿನ ಸಬ್ಸಿಡಿಗಳಿಂದ ಕಾರ್ಯನಿರ್ವಹಿಸುವ ರೈತರು, ಸಣ್ಣ ಜಮೀನು ಹೊಂದಿರುವ ಹಾಗೂ ಸಮರ್ಪಕ ಕನಿಷ್ಠ ಬೆಂಬಲ ಬೆಲೆ (MSP) ಪಡೆಯಲು ಕಷ್ಟಪಡುತ್ತಿರುವ ಭಾರತೀಯ ರೈತರಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Rahul Gandhi
ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲು ಬಿಜೆಪಿ ಸಂಸದ ನೋಟಿಸ್; ಕಾರಣ ಏನು ಗೊತ್ತಾ?

ಸದನ ನಿಯಮ ಏನು ಹೇಳುತ್ತದೆ?

ಹಿಂದಿನ ಲೋಕಸಭಾ ಕಾರ್ಯದರ್ಶಿ ಜನರಲ್ ಪಿ.ಡಿ.ಟಿ. ಆಚಾರ್ಯ ಅವರು ಈ ಕ್ರಮದ ಪ್ರಕ್ರಿಯಾತ್ಮಕ ಆಧಾರವನ್ನು ಪ್ರಶ್ನಿಸಿದ್ದು, ದುಬೆ ಅವರು ಯಾವ ನಿಯಮದಡಿ ಈ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಹೇಳಿದ್ದಾರೆ. ಸಂಸದರು ಸದನದ ಅವಮಾನ ಮಾಡಿದ್ದಾರೆ ಎಂದು ಆರೋಪವಿದ್ದಲ್ಲಿ, ಸರಿಯಾದ ವಿಧಾನವೆಂದರೆ ಅವಮಾನ ನೋಟಿಸ್ ಸಲ್ಲಿಸುವುದು. ನಂತರ ಅದನ್ನು ವಿಶೇಷ ಹಕ್ಕುಗಳ ಸಮಿತಿ (Privileges Committee) ಪರಿಶೀಲಿಸುತ್ತದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ತಿಳಿಸಿದೆ.

ಪಿ.ಡಿ.ಟಿ. ಆಚಾರ್ಯ ಅವರು ಮತ್ತಷ್ಟು ಸ್ಪಷ್ಟಪಡಿಸಿದಂತೆ, ಸದನಕ್ಕೆ ಸದಸ್ಯರನ್ನು ಹೊರಹಾಕುವ (expel) ಅಧಿಕಾರವಿದ್ದರೂ, ಸಂಸದರನ್ನು ಅನರ್ಹ (disqualify) ಮಾಡುವ ಅಧಿಕಾರ ಇಲ್ಲ. ಅನರ್ಹತೆ ವಿಧಿಸುವುದು ಕೇವಲ ಪಕ್ಷತ್ಯಾಗ ವಿರೋಧಿ ಕಾಯ್ದೆ (Anti-Defection Law) ಅಥವಾ ಜನಪ್ರತಿನಿಧಿಗಳ ಕಾಯ್ದೆ (Representation of the People Act) ಅಡಿಯಲ್ಲಿ ಮಾತ್ರ ಸಾಧ್ಯ.

ಮುಂದಿನ ಯಾವುದೇ ಕ್ರಮ ಕೈಗೊಳ್ಳುವ ಮೊದಲು, ಈ ಪ್ರಸ್ತಾವನೆಯ ಸ್ವೀಕಾರಾರ್ಹತೆಯನ್ನು ಸಂಸತ್ತಿನ ನಿಯಮಾವಳಿಗಳ ಪ್ರಕಾರ ಪರಿಶೀಲಿಸಲಾಗುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com