

ಚಂಡೀಗಢ: ಬಟಿಂಡಾದ ಜಿಯೋಂಡ್‌ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಜಿಲ್ಲಾ ಆಡಳಿತ ಸಂಕೀರ್ಣಕ್ಕೆ (DCA) ರೈತರು ಮೆರವಣಿಗೆ ನಡೆಸಲು ಯತ್ನಿಸಿದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ.
ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಹಲವು ರೈತರು ಗಾಯಗೊಂಡರು. ಪೊಲೀಸರು ಅಶ್ರುವಾಯು ಪ್ರಯೋಗಕ್ಕೂ ಮುನ್ನಾ ಎರಡೂ ಕಡೆಯವರು ಪರಸ್ಪರ ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಹೊಡೆದಿದ್ದಾರೆ ಎಂದು ವರದಿಯಾಗಿದೆ.
ನಗರಕ್ಕೆ ಬರುವ ಎಲ್ಲ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿದ್ದರು. ಮಂಗಳವಾರ ರಾತ್ರಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಹಲವಾರು ರೈತರನ್ನು ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿದೆ ಅಥವಾ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಮಹಿಳೆಯರು ಸೇರಿದಂತೆ ಕೆಲವು ರೈತರನ್ನು ಜೇಂಡ್ ಗ್ರಾಮದಿಂದ ಬಂಧಿಸಲಾಯಿತು.
ಬಟಿಂಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಜ್ಯೋತಿ ಯಾದವ್ ಮಾತನಾಡಿ, ಕೆಲವು ಮನೆಗಳ ಮೇಲ್ಛಾವಣಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ಹಕ್ಕು ಎಂದು ಹೇಳಿದ ಪ್ರತಿಭಟನಾಕಾರರು, ಪ್ರತಿಭಟನೆಯ ಕರೆಗೂ ಮುನ್ನ ಪೊಲೀಸರು ರೈತ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (Ekta Ugrahan) ತನ್ನ ಇಬ್ಬರು ಕಾರ್ಯಕರ್ತರಾದ ಶಗನ್‌ದೀಪ್ ಸಿಂಗ್ ಜಿಯೋಂಡ್ ಮತ್ತು ಬಲದೇವ್ ಸಿಂಗ್ ಚೌಕೆ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ DCA ಹೊರಗೆ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಘೋಷಿಸಿತ್ತು.
ಕಳೆದ ವರ್ಷ ಪ್ರತಿಭಟನೆಯ ವೇಳೆ ಇಬ್ಬರನ್ನು ಬಂಧಿಸಲಾಗಿತ್ತು ಮತ್ತು ಏಪ್ರಿಲ್‌ನಿಂದ ಬಟಿಂಡಾ ಜೈಲಿನಲ್ಲಿ ಇರಿಸಲಾಗಿತ್ತು. ಭಾರೀ ಪೊಲೀಸ್ ನಿಯೋಜನೆಯ ಹೊರತಾಗಿಯೂ, ಫರೀದ್‌ಕೋಟ್ ಜಿಲ್ಲೆಯ ಜೈತೋ ಬ್ಲಾಕ್‌ನಿಂದ ಕೆಲವು ರೈತರು ಮಧ್ಯಾಹ್ನ DAC ಗೆ ತಲುಪುವಲ್ಲಿ ಯಶಸ್ವಿಯಾದರು ಆದರೆ ತಕ್ಷಣ ಅವರನ್ನು ಬಂಧಿಸಲಾಯಿತು. ಈ ಮಧ್ಯೆ ಶಗನ್‌ದೀಪ್ ಮತ್ತು ಬಲದೇವ್‌ಗೆ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
Advertisement