

ರಾಯ್ಪುರ: ಸಂಭೋಗ ನಡೆಯದೆ ಕೇವಲ ಸ್ಖಲನವಾಗಿರುವುದು ಅತ್ಯಾಚಾರಕ್ಕೆ ಪ್ರಯತ್ನವೇ ಹೊರತು ಅದು ಅತ್ಯಾಚಾರವಲ್ಲ ಎಂದು ಛತ್ತೀಸ್ ಗಢ ಹೈಕೋರ್ಟ್ ಸ್ಪಷ್ಟಪಡಿಸಿದೆ.
20 ವರ್ಷ ಹಳೆಯ ಅತ್ಯಾಚಾರ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಛತ್ತೀಸ್ಗಢ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಆತ ಮಾಡಿದ್ದು ಅತ್ಯಾಚಾರವಲ್ಲ, ಅತ್ಯಾಚಾರಕ್ಕೆ ಪ್ರಯತ್ನ ಎಂದು ಹೇಳಿದ ಕೋರ್ಟ್ ಏಳು ವರ್ಷಗಳ ಜೈಲು ಶಿಕ್ಷೆಯ ಬದಲು ಮೂರು ವರ್ಷ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
2004ರಲ್ಲಿ ಧಮ್ತಾರಿ ಜಿಲ್ಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಯ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದಾರೆ.
ನ್ಯಾಯಾಲಯ ಹೇಳಿದ್ದೇನು?
ಸಂಭೋಗ ನಡೆಯದೆ ಕೇವಲ ಸ್ಖಲನವಾಗಿರುವುದು ಅತ್ಯಾಚಾರಕ್ಕೆ ಪ್ರಯತ್ನ, ಅದು ಅತ್ಯಾಚಾರವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಂತ್ರಸ್ತೆಯ ಸಾಕ್ಷ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಆಕೆಯ ಹೇಳಿಕೆಗಳಲ್ಲಿ ಏಕರೂಪತೆ ಕಂಡುಬಂದಿಲ್ಲ.
ಒಮ್ಮೆ ನೀಡಿದ ಹೇಳಿಕೆಗೂ ಮತ್ತೊಮ್ಮೆ ನೀಡಿದ ಹೇಳಿಕೆಗೂ ವ್ಯತ್ಯಾಸವಿತ್ತು. ಹೀಗಾಗಿ ಅತ್ಯಾಚಾರ ನಡೆದಿದೆ ಎಂದು ಕಾನೂನುಬದ್ಧವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ. ಅತ್ಯಾಚಾರದ ಆರೋಪವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಆರೋಪಿ ಪರ ವಕೀಲರ ವಾದ
ಈ ಕುರಿತು ಆರೋಪಿ ಪರ ವಾದ ಮಂಡಿಸಿದ್ದ ವಕೀಲರು, 'ಸಂಭೋಗ ನಡೆಸಿಲ್ಲ. ಆದರೆ ಅದಕ್ಕಾಗಿ ಪ್ರಯತ್ನಿಸಿದ್ದಾನೆ. ಬಲವಂತದ ಸಂಭೋಗ ನಡೆದರೆ ಮಾತ್ರ ಅದು ಅತ್ಯಾಚಾರವಾಗುತ್ತದೆ. ಇಲ್ಲವಾದರೆ ಅದು ಅತ್ಯಾಚಾರಕ್ಕೆ ಪ್ರಯತ್ನ ಪ್ರಕರಣವಾಗುತ್ತದೆ. ಅತ್ಯಾಚಾರ ಎಂದು ಪರಿಗಣಿಸಲು ಸಂಭೋಗ ನಡೆದಿರಬೇಕು, ಕೇವಲ ಸ್ಖಲನ ಸಾಕಾಗುವುದಿಲ್ಲ ಎಂದು ವಾದಿಸಿದ್ದಾರೆ.
ಏನಿದು ಪ್ರಕರಣ?
ಈ ಪ್ರಕರಣವು 2004ರ ಮೇ 21ರಂದು ಧಮ್ತಾರಿ ಜಿಲ್ಲೆಯಲ್ಲಿ ನಡೆದಿದೆ. ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿ ಸಂತ್ರಸ್ತೆಯನ್ನು ಬಲವಂತವಾಗಿ ಅವಳ ಮನೆಯಿಂದ ತನ್ನ ಮನೆಗೆ ಎಳೆದುಕೊಂಡು ಹೋಗಿ, ಅವಳನ್ನು ವಿವಸ್ತ್ರಗೊಳಿಸಿ, ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭೋಗಕ್ಕೆ ಪ್ರಯತ್ನಿಸಿದ್ದನು. ಆತ ಸಂತ್ರಸ್ತೆಯನ್ನು ಕೋಣೆಯೊಳಗೆ ಬಂಧಿಸಿ, ಅವಳ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿದ್ದನು. ಗಂಟೆಗಳ ಬಳಿಕ ಸಂತ್ರಸ್ತೆಯ ತಾಯಿ ಅವಳನ್ನು ರಕ್ಷಿಸಿದ್ದರು.
2005ರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(1) ಮತ್ತು 342 ಅಡಿಯಲ್ಲಿ ದೋಷಿ ಎಂದು ಘೋಷಿಸಿ, ಅತ್ಯಾಚಾರ ಪ್ರಕರಣದಲ್ಲಿ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಅಕ್ರಮ ಬಂಧನಕ್ಕೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಆರೋಪಿ ಮೇಲ್ಮನವಿ ಸಲ್ಲಿಸಿದ್ದನು. ಹೈಕೋರ್ಟ್ ಸಂತ್ರಸ್ತೆಯ ಸಾಕ್ಷ್ಯ ಹಾಗೂ ವೈದ್ಯಕೀಯ ವರದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿತು.
Advertisement