

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವಿವಾದಾತ್ಮಕ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಜಾರ್ಖಂಡ್ ಮತ್ತು ಒಡಿಶಾದಿಂದ ನ್ಯಾಯಾಧೀಶರನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು, ಪ್ರಸ್ತುತ SIR ಪ್ರಕ್ರಿಯೆಗೆ ನಿಯೋಜಿಸಲಾದ 250 ಜಿಲ್ಲಾ ನ್ಯಾಯಾಧೀಶರಿಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಪ್ರಕ್ರಿಯೆಗೊಳಿಸಲು ಸುಮಾರು 80 ದಿನಗಳು ಬೇಕಾಗುತ್ತದೆ ಎಂಬ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬರೆದ ಪತ್ರವನ್ನು ಪರಿಗಣಿಸಿತು.
ಪೀಠವು ಪರಿಶೀಲನೆ ವೇಗಗೊಳಿಸಲು ಸಿವಿಲ್ ನ್ಯಾಯಾಧೀಶರನ್ನು ನಿಯೋಜಿಸಲು ಅನುಮತಿ ನೀಡಿದ್ದು, ಜಾರ್ಖಂಡ್ ಮತ್ತು ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸಿ ಸಮಾನ ಹುದ್ದೆಯ ನ್ಯಾಯಾಧೀಶರನ್ನು ಕೋರುವಂತೆ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸೂಚಿಸಿದೆ.
ಇತರ ರಾಜ್ಯಗಳಿಂದ ನಿಯೋಜಿಸಲಾದ ನ್ಯಾಯಾಧಿಕಾರಿಗಳ ವೆಚ್ಚವನ್ನು ಭಾರತೀಯ ಚುನಾವಣಾ ಆಯೋಗವೇ ಭರಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಇದೇ ವೇಳೆ, ಫೆಬ್ರವರಿ 28ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಅನುಮತಿ ನೀಡಲಾಗಿದ್ದು, ಪರಿಶೀಲನೆ ಮುಂದುವರಿದಂತೆ ಪೂರಕ ಪಟ್ಟಿಗಳನ್ನು (ಸಪ್ಲಿಮೆಂಟರಿ ಲಿಸ್ಟ್) ಬಿಡುಗಡೆ ಮಾಡಬಹುದೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂವಿಧಾನದ ಕಲಂ 142ರ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿದ ಪೀಠ, ಪರಿಶೀಲನೆ ಪೂರ್ಣಗೊಂಡ ಮತದಾರರನ್ನು ಫೆಬ್ರವರಿ 28ರ ಅಂತಿಮ ಪಟ್ಟಿಗೆ ಸೇರಿಸಲು ಅವಕಾಶ ನೀಡಿದೆ.
ಫೆಬ್ರವರಿ 20 ರಂದು, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ನ್ಯಾಯಾಲಯವು, ವಿವಾದಿತ SIR ಪ್ರಕ್ರಿಯೆಗೆ ಸಹಾಯ ಮಾಡಲು ಹಾಲಿ ಮತ್ತು ಮಾಜಿ ಜಿಲ್ಲಾ ನ್ಯಾಯಾಧೀಶರನ್ನು ನಿಯೋಜಿಸಲು ಅನುಮತಿ ನೀಡಿತ್ತು.
Advertisement