

ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಬದಲಾವಣೆ ಮಾಡುವ ಕೇರಳ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರದ ಅನುಮೋದನೆ ನಂತರ ಕೇರಳ ರಾಜ್ಯದ ಹೆಸರು ಬದಲಾವಣೆಯಾಗಿದ್ದು, ಹೊಸ ಹೆಸರು ಅಸ್ತಿತ್ವಕ್ಕೆ ಬಂದಿದೆ.
ಈ ಬೆಳವಣಿಗೆಯು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.
ರಾಜ್ಯಕ್ಕೆ ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕೇರಳ ವಿಧಾನಸಭೆ 2024ರ ಜೂನ್ 24 ರಂದು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿ, ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಈಗ ಕೊನೆಗೂ ಕೇಂದ್ರ ಸಚಿವ ಸಂಪುಟ ಅನಮೋದನೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯ ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿತ್ತು. ಇದರ ನಂತರ ವಿಧಾನಸಭೆ ಎರಡನೇ ಬಾರಿಗೆ ನಿರ್ಣಯ ಅಂಗೀಕರಿಸಿತ್ತು. ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇರಳ ಸರ್ಕಾರದ ಈ ಬೇಡಿಕೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಷಾ ಮತ್ತು ಸಾಂಸ್ಕೃತಿಕ ಗುರುತಿನ ಬಗ್ಗೆ ಚರ್ಚೆ ನಡೆದಿದೆ. ಮಲಯಾಳಂನಲ್ಲಿ ‘ಕೇರಳಂ’ ಎಂದು ಕರೆಯುವುದು ಸಾಮಾನ್ಯವಾಗಿದ್ದು, ಇದನ್ನು ಅಧಿಕೃತವಾಗಿ ಬದಲಾಯಿಸುವುದು ಸಂವಿಧಾನದ ಎಂಟನೇ ಶೆಡ್ಯೂಲ್ ನಲ್ಲಿ ಎಲ್ಲಾ ಭಾಷೆಗಳಲ್ಲಿ ಸಮಾನವಾಗಿ ಉಲ್ಲೇಖಿಸುವ ಉದ್ದೇಶವನ್ನು ಹೊಂದಿದೆ. ಆಗಸ್ಟ್ 2023ರಲ್ಲಿ ಸದನ ಇದೇ ರೀತಿಯ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ ಗೃಹ ಸಚಿವಾಲಯ ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿತ್ತು. ಇದರ ನಂತರ ಎರಡನೇ ಬಾರಿಗೆ ನಿರ್ಣಯ ಅಂಗೀಕರಿಸಲಾಗಿದೆ.
ಕೇಂದ್ರ ಸಚಿವ ಸಂಪುಟದ ಅನುಮೋದನೆಯ ನಂತರ ಈ ಬದಲಾವಣೆಯನ್ನು ಸಂವಿಧಾನದಲ್ಲಿ ತರುವ ಕ್ರಮಗಳು ಆರಂಭವಾಗಲಿವೆ.
Advertisement