

ನವದೆಹಲಿ: ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲದ ಮೇಲೆ ಹೊಸ ಸೆಸ್ ವಿಧಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹೊಸ ತೆರಿಗೆ ಮತ್ತು ಸೆಸ್‌ಗಳು ಫೆಬ್ರವರಿ 1ರಿಂದ ಜಾರಿಗೆ ಬರಲಿದ್ದು, ಸಿಗರೇಟ್, ಬೀಡಿ, ಪಾನ್ ಮಸಾಲಗಳ ಬೆಲೆಯೂ ಏರಿಕೆಯಾಗಲಿದೆ.
ಕೇಂದ್ರ ಸರ್ಕಾರವು ಬುಧವಾರ ಅಧಿಸೂಚನೆ ಹೊರಡಿಸಿದ್ದು ಅಧಿಸೂಚನೆ ಪ್ರಕಾರ, ತಂಬಾಕು ಮತ್ತು ಪಾನ್ ಮಸಾಲದ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಿರುತ್ತವೆ. ಪ್ರಸ್ತುತ, ಈ ಮಾದಕ ಸರಕುಗಳ ಮೇಲೆ ವಿಧಿಸಲಾಗುತ್ತಿರುವ ಪರಿಹಾರ ಸೆಸ್ ಹೆಚ್ಚಾಗಲಿದೆ.
ಫೆಬ್ರವರಿ 1ರಿಂದ ಪಾನ್ ಮಸಾಲ, ಸಿಗರೇಟ್, ತಂಬಾಕು ಮತ್ತು ಅಂತಹ ಮಾದಕ ಉತ್ಪನ್ನಗಳ ಮೇಲೆ ಶೇ. 40ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಜೊತೆಗೆ, ಪಾನ್ ಮಸಾಲದ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುತ್ತದೆ. ಇನ್ನು, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಹೇರಲಾಗುತ್ತದೆ ಎಂದು ಅಧಿಸೂಚನೆ ಹೇಳಿದೆ. ಬೀಡಿಗಳ ಮೇಲೆ ಶೇ.18 ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಡಿಸೆಂಬರ್‌ನಲ್ಲಿ ಸಂಸತ್, ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಹಾಗೂ ತಂಬಾಕಿನ ಮೇಲಿನ ಅಬಕಾರಿ ಸುಂಕವನ್ನು ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು.
ಈ ಮಸೂದೆಯು ಪಾನ್ ಮಸಾಲಾ ತಯಾರಿಕೆ ಮತ್ತು ತಂಬಾಕಿನ ಮೇಲಿನ ಅಬಕಾರಿ ಸುಂಕದ ಜೊತೆಗೆ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅವಕಾಶ ನೀಡುತ್ತದೆ. ಈ ಸಮೂದೆಯು ಸಂಸತ್‌ನಲ್ಲಿ ಅಂಗೀಕಾರಕೊಂಡಿದ್ದು, ಫೆಬ್ರವರಿ 1ರಿಂದ ಜಾರಿಗೆ ಬರಲಿದೆ.
ಈ ಸಂಬಂಧವಾಗಿ ಹಣಕಾಸು ಸಚಿವಾಲಯವು ಬುಧವಾರ ‘ಚೂಯಿಂಗ್ ತಂಬಾಕು, ಜರ್ದಾ, ಸುಗಂಧಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಧಾರ ಮತ್ತು ಸುಂಕ ಸಂಗ್ರಹ) ನಿಯಮಗಳು–2026’ ಕುರಿತ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಮೂಲಕ ತಂಬಾಕು ಉತ್ಪಾದನೆ ಮತ್ತು ಮಾರಾಟದ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶವಿದೆ.
ತೆರಿಗೆ ವಂಚನೆಯನ್ನು ತಡೆಯಲು, ಸಚಿವಾಲಯವು ಕಠಿಣ ಮೇಲ್ವಿಚಾರಣಾ ಅವಶ್ಯಕತೆಗಳನ್ನು ಪರಿಚಯಿಸಿದೆ. ತಯಾರಕರು ಎಲ್ಲಾ ಪ್ಯಾಕಿಂಗ್ ಪ್ರದೇಶಗಳನ್ನು ಒಳಗೊಂಡ ಕ್ರಿಯಾತ್ಮಕ ಸಿಸಿಟಿವಿ ವ್ಯವಸ್ಥೆಗಳನ್ನು ಸ್ಥಾಪಿಸಬೇಕು ಮತ್ತು 48 ತಿಂಗಳುಗಳವರೆಗೆ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು.
ಎಲ್ಲಾ ತಯಾರಕರು ಫೆಬ್ರವರಿ 7, 2026 ರೊಳಗೆ ತಮ್ಮ ಉತ್ಪಾದನಾ ಅಂಶಗಳು ಮತ್ತು ಯಂತ್ರದ ತಾಂತ್ರಿಕ ವಿಶೇಷಣಗಳನ್ನುವಿವರವಾದ ಘೋಷಣೆಯನ್ನು (ಫಾರ್ಮ್ CE DEC-01) ಸಲ್ಲಿಸಬೇಕು ಎಂದು ಸೂಚಿಸಿದೆ.
Advertisement