ಮಂಗಳೂರು: ದಕ್ಷಿಣ ಕನ್ನಡದ ಮೊದಲ ತಂಬಾಕು ಮುಕ್ತ ಗ್ರಾಮ ಪಡುಪೆರಾರ!

ಪಡುಪೆರಾರ್ ಗ್ರಾಮವು ಮಂಗಳೂರಿನ ಹೊರವಲಯದಲ್ಲಿರುವ ಬಜ್ಪೆಯಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ಸ್ಥಳೀಯ ಆಡಳಿತದ ಪ್ರಕಾರ ಸುಮಾರು 2225 ಕುಟುಂಬಗಳ ಜನಸಂಖ್ಯೆ ಹೊಂದಿದೆ.
 Paduperar gram
ಪಡುಪೆರಾರ ಗ್ರಾಮ
Updated on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಪಡುಪೆರಾರ ಗ್ರಾಮವನ್ನು ಜಿಲ್ಲಾ ಆರೋಗ್ಯ ಇಲಾಖೆಯ ತಂಬಾಕು ಮುಕ್ತ ಯೋಜನೆಯಡಿ ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಲಾಗಿದೆ.

ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರು ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಮನ್ನಣೆ ಪಡೆದ ಜಿಲ್ಲೆಯ ಮೊದಲ ಗ್ರಾಮ ಪಡುಪೆರಾರ್ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಪಡುಪೆರಾರ್ ಗ್ರಾಮವು ಮಂಗಳೂರಿನ ಹೊರವಲಯದಲ್ಲಿರುವ ಬಜ್ಪೆಯಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ಸ್ಥಳೀಯ ಆಡಳಿತದ ಪ್ರಕಾರ ಸುಮಾರು 2225 ಕುಟುಂಬಗಳ ಜನಸಂಖ್ಯೆ ಹೊಂದಿದೆ. ಬೀಡಿ, ಸಿಗರೇಟ್, ಪಾನ್ ಮಸಾಲ ಮಾರಾಟ ಸೇರಿದಂತೆ ತಂಬಾಕು ಉತ್ಪನ್ನಗಳಿಂದ ದೂರವಿರಲು ಸ್ಥಳೀಯ ಅಧಿಕಾರಿಗಳು ಗ್ರಾಮಸ್ಥರು ಮತ್ತು ಅಂಗಡಿಯವರೊಂದಿಗೆ ಚರ್ಚೆ ನಡೆಸಿದರು. ಪಂಚಾಯತ್ ತಂಡವು ಅಂಗನವಾಡಿಗಳು ಮತ್ತು ಶಾಲೆಗಳಿಗೆ ಭೇಟಿ ನೀಡಿ, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿತು.

ಪಡುಪೆರಾರ್‌ನಲ್ಲಿ 12 ಅಂಗಡಿಗಳಿವೆ, ಅವುಗಳು ಈ ಹಿಂದೆ ಈ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವು. "ಕಳೆದ ಒಂದು ವರ್ಷದಿಂದ ನಾನು ಗ್ರಾಮವನ್ನು ತಂಬಾಕು ಮುಕ್ತಗೊಳಿಸಲು ಶ್ರಮಿಸುತ್ತಿದ್ದೇನೆ. ನಾನು ಮತ್ತು ಆರೋಗ್ಯ ಅಧಿಕಾರಿಗಳು ಈ ಅಂಗಡಿಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದೆವು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಬೆಂಬಲದೊಂದಿಗೆ, ಪಂಚಾಯತ್ ಸದಸ್ಯರು, ಗ್ರಾಮಸ್ಥರು, ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಯುವ ವೇದಿಕೆಗಳು ಸೇರಿದಂತೆ ಎಲ್ಲಾ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದೇವೆ.

 Paduperar gram
World No Tobacco Day 2025: ಪರವಾನಗಿ ಇಲ್ಲದೆ ತಂಬಾಕು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ; ಪೊಲೀಸರ ಎಚ್ಚರಿಕೆ

ಪಡುಪೆರಾರ್ ಗ್ರಾಮದಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಲು ಎಲ್ಲರೂ ಪರಸ್ಪರ ನಿರ್ಧರಿಸಿದ್ದೇವೆ. ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ನಾವು ಜನರು ಮತ್ತು ಅಂಗಡಿಯವರಿಗೆ ಅರಿವು ಮೂಡಿಸಿದ್ದೇವೆ. ಈ ವರ್ಷದ ಆಗಸ್ಟ್‌ನಲ್ಲಿ ನಾವು ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೆಲವು ದಿನಗಳ ಹಿಂದೆ ನಿವೃತ್ತರಾದ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಉಗ್ಗಪ್ಪ ಮೂಲ್ಯ ಹೇಳಿದರು.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಅವರು ಗಾಂಧಿ ಗ್ರಾಮ ಪುರಸ್ಕಾರವನ್ನು ಸಹ ಪಡೆದಿದ್ದಾರೆ. ಗ್ರಾಮದಲ್ಲಿ ಬೀಡಿ ಸೇವನೆ ಮಾಡಬಾರದು ಎಂಬ ಕಾರಣಕ್ಕೆ ಬೀಡಿ ಸುತ್ತುವ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಯಿತು.

ರಾಜ್ಯ ಸರ್ಕಾರ ಹೊರಡಿಸಿದ ತಂಬಾಕು ನಿಯಂತ್ರಣ ಮೌಲ್ಯಮಾಪನ ಮಾರ್ಗಸೂಚಿಗಳ ಪ್ರಕಾರ, ಪಡುಪೆರಾರ್ ಗ್ರಾಮವು 150 ಅಂಕಗಳಲ್ಲಿ 129 ಅಂಕಗಳನ್ನು ಗಳಿಸಿದೆ, ಇದು ಒಂದು ವರ್ಷ ಮಾನ್ಯವಾಗಿರುತ್ತದೆ. ಆರೋಗ್ಯ ಇಲಾಖೆಯು ಈಗ ಪಡುಪೆರಾರ್ ಗ್ರಾಮ ಪಂಚಾಯತ್ ತಂಬಾಕು ಮುಕ್ತ ಗ್ರಾಮವೆಂದು ಘೋಷಿಸುವ ಫಲಕವನ್ನು ಹಾಕಿದೆ.

ಯಾವುದೇ ಪ್ರದೇಶವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ಸಮುದಾಯದ ಸಾಮೂಹಿಕ ಭಾಗವಹಿಸುವಿಕೆ ಅಗತ್ಯವಿದೆ ಎಂದು ಡಾ. ನವೀನ್ ಚಂದ್ರ ಹೇಳಿದರು. ಈ ಸಂಬಂಧ ನಾವು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದೇವೆ, ಗ್ರಾಮಕ್ಕೆ ಅಧಿಕೃತವಾಗಿ ತಂಬಾಕು ಮುಕ್ತ ಎಂದು ಘೋಷಿಸುವ ಪ್ರಮಾಣಪತ್ರವನ್ನು ನೀಡುವ ನಿರೀಕ್ಷೆಯಿದೆ. ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದೆ. ರಾಜ್ಯಾದ್ಯಂತ 150 ಕ್ಕೂ ಹೆಚ್ಚು ಗ್ರಾಮಗಳು ತಂಬಾಕು ಮುಕ್ತವಾಗುತ್ತಿವೆ. ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸಲು ನಾವು ಶ್ರಮಿಸುತ್ತೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com