
ಬೆಂಗಳೂರು: ತಂಬಾಕು ವ್ಯಾಪಾರಿಗಳು ಬಿಬಿಎಂಪಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದ್ದು, ಪರವಾನಗಿ ಇಲ್ಲದೆ ತಂಬಾಕು ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು, "ಮೇ 31 ರಂದು ವಿಶ್ವ ಧೂಮಪಾನ ನಿಷೇಧ ದಿನ'ದ ಪ್ರಯುಕ್ತ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಮತ್ತು ತಂಬಾಕು ನಿಯಂತ್ರಣ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಗರ ಪೊಲೀಸರು ಬೆಂಗಳೂರಿನಾದ್ಯಂತ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆಂದು ಹೇಳಿದರು.
ತಂಬಾಕು ಮುಕ್ತ ವಾತಾವರಣವನ್ನು ಉತ್ತೇಜಿಸಲು ಪ್ರಯತ್ನ ನಡೆಸಲಾಗುತ್ತಿದ್ದು, ಎಲ್ಲಾ ತಂಬಾಕು ವ್ಯಾಪಾರಿಗಳು ಮಾನ್ಯ ಪರವಾನಗಿಯನ್ನು ಹೊಂದಿರಬೇಕು. ಮೇ 27 ರಿಂದ ಜೂನ್ 2 ರವರೆಗೆ, ಪೊಲೀಸ್ ಇಲಾಖೆ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ, 2003 (COTPA) ಜಾರಿಗೊಳಿಸುವಿಕೆಯನ್ನು ತೀವ್ರಗೊಳಿಸಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಮತ್ತು ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ಮಾಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹವರ ವಿರುದ್ದ ಕೋಟ್ಟಾ ಕಾಯ್ದೆಯಡಿ ಪ್ರಕರಣ ದಾಖಲಿಸಲಿದ್ದಾರೆ ಎಂದು ತಿಳಿಸಿದರು.
ಇ-ಸಿಗರೇಟ್‌ಗಳು ಮತ್ತು ವೇಪಿಂಗ್ ಸಾಧನಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್‌ಗಳ ನಿಷೇಧ ಸಂಬಂಧ ಮಾಲ್‌ಗಳು, ಕಾಫಿ ಬಾರ್‌ಗಳು ಮತ್ತು ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಾಗುವುದು. ನಿಷೇಧಿತ ಹುಕ್ಕಾ ಬಾರ್‌ಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಅಂತಹ ಅಕ್ರಮ ಸ್ಥಳಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.
ತಂಬಾಕು ವ್ಯಾಪಾರಿಗಳು ಬಿಬಿಎಂಪಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ವ್ಯಾಪಾರಿಕ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಿದ್ದಾರೆ. ತಂಬಾಕು ಮಾರಾಟ ಲೈಸೆನ್ಸ್ ಪಡೆಯುವ ಅಗತ್ಯತೆ ಮತ್ತು ಪ್ರಕ್ರಿಯೆ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಶೀಘ್ರ ಟೋಯಿಂಗ್ ರೂಪುರೇಷೆ ಸಿದ್ದ
ನಗರದಲ್ಲಿ ಟೋಯಿಂಗ್ ಮರು ಜಾರಿ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಮ್ಮದೇ ವಾಹನಗಳನ್ನು ಬಳಸಬೇಕಾ ಅಥವಾ ಹೊಸ ವಾಹನ ಖರೀದಿಸಿ ಟೋಯಿಂಗ್ ಮಾಡಬೇಕಾ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಶೀಘ್ರದಲ್ಲೇ ಅದರ ರೂಪುರೇಷೆಗಳು ಸಿದ್ಧವಾಗಬೇಕಿದೆ. ಶೀಘ್ರದಲ್ಲೇ ನಗರದ ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಯಿಂಗ್ ಮರು ಜಾರಿಯಾಗಲಿದೆ ಎಂದು ಇದೇ ವೇಳೆ ತಿಳಿಸಿದರು.
Advertisement