

ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ಶನಿವಾರ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಶನಿವಾರ ತೆಲಂಗಾಣದ ಕೊಂಡಗಟ್ಟು ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮೇಲೆ ಹೈ ಟೆನ್ಷನ್ ವೈರ್ ಹಾದು ಹೋಗಿದ್ದು, ಈ ವೇಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪವನ್ ಕಲ್ಯಾಣ್ ಶನಿವಾರ ಜಗ್ತಿಯಾಲ್ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಂಡಗಟ್ಟುವಿಗೆ ಭೇಟಿ ನೀಡಿದರು. ಅವರು ಹೆಲಿಕಾಪ್ಟರ್ ಮೂಲಕ ನಾಚುಪಲ್ಲಿಯಲ್ಲಿರುವ ಜೆಎನ್‌ಟಿಯು ಹೆಲಿಪ್ಯಾಡ್ ತಲುಪಿದರು.
ಪಕ್ಷದ ಕಾರ್ಯಕರ್ತರು ಮತ್ತು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ ಪವನ್ ಕಲ್ಯಾಣ್ ರಸ್ತೆ ಮಾರ್ಗವಾಗಿ ತೆರಳಿದರು. ಈ ವೇಳೆ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸುತ್ತಿದ್ದ ಪವನ್ ಕಲ್ಯಾಣ್ ಮೇಲಿದ್ದ ಹೈ ಟೆನ್ಷನ್ ವೈರ್ ಗಮನಿಸಿ ಕೂಡಲೇ ಅಲ್ಲಿಯೇ ಮಲಗಿದ್ದಾರೆ.
ಈ ವೇಳೆ ವೈರ್ ಕಡಿಮೆ ಅಂತರದಲ್ಲಿ ಅವರನ್ನು ಹಾದು ಹೋಗಿದೆ. ಅದೃಷ್ಯವಶಾತ್ ಪವನ್ ಕಲ್ಯಾಣ್ ಗಾಗಲಿ ಅಥವಾ ಅಂಗರಕ್ಷಕರಿಗಾಗಲಿ ತೊಂದರೆಯಾಗಿಲ್ಲ.
ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದ ಸಿಬ್ಬಂದಿ
ಇನ್ನು ಈ ಭಾಗದಲ್ಲಿ ಪವನ್ ಕಲ್ಯಾಣ್ ಆಗಮಿಸುತ್ತಿದ್ದಾರೆ ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸರಬರಾಜು ಇಲಾಖೆ ಸಿಬ್ಬಂದಿ ಈ ರಸ್ತೆ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದರು. ಹೀಗಾಗಿ ಅಲ್ಲಿ ಯಾವುದೇ ಪ್ರಮಾದ ಸಂಭವಿಸಿಲ್ಲ.
ಪುನರ್ಜನ್ಮ ಎಂದ ಪವನ್ ಕಲ್ಯಾಣ್
ಇನ್ನು ಈ ಘಟನೆ ಬಳಿಕ ಕೊಂಡಗಟ್ಟು ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದ ಪವನ್ ಕಲ್ಯಾಣ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ವಿದ್ಯುತ್ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವುದಾಗಿ ಮತ್ತು ಅದಕ್ಕಾಗಿಯೇ ಕೊಂಡಗಟ್ಟು ನನಗೆ ಪುನರ್ಜನ್ಮ ನೀಡಿದೆ ಎಂದು ಹೇಳಿದರು.
ಕೊಂಡಗಟ್ಟು ನನಗೆ ಪುನರ್ಜನ್ಮ ನೀಡಿತು.. ಹೈಟೆನ್ಷನ್ ತಂತಿ ತಗುಲಿದಾಗ ನಾನು ಹೇಗೆ ಬದುಕುಳಿದೆ ಎಂದು ನನಗೆ ತಿಳಿದಿಲ್ಲ.. ನನಗೆ ಕೊಂಡಗಟ್ಟು ಆಂಜನೇಯ ಸ್ವಾಮಿಯ ಮೇಲೆ ಭಕ್ತಿ ಇದೆ.. ಅರ್ಚಕರು ದೀಕ್ಷೆಗಾಗಿ ಇಲ್ಲಿ ಹಾಸ್ಟೆಲ್ ಬಯಸಿದ್ದರು.. ಅದೃಷ್ಟವಶಾತ್, ನನಗೆ ಸ್ವಾಮಿಯ ಕೃಪೆ ಮತ್ತು ಆಶೀರ್ವಾದ ಸಿಕ್ಕಿತು ಎಂದರು.
ಅಲ್ಲದೆ ಅಪಘಾತ ನಡೆದ ಸ್ಥಳ ಕೊಂಡಗಟ್ಟಿಗೆ ಬಹಳ ಹತ್ತಿರದಲ್ಲಿರುವುದರಿಂದ, ಭಗವಂತನ ಕೃಪೆಯಿಂದಾಗಿ ತನಗೆ ಮತ್ತೆ ಜೀವ ನೀಡಲಾಗಿದೆ ಎಂದರು. ಅಲ್ಲದೆ ಟಿಟಿಡಿ 35.19 ಕೋಟಿ ರೂ.ಗಳಿಗೆ ಮಂಜೂರು ಮಾಡಿದ ನಿಧಿಯಲ್ಲಿ 96 ಕೊಠಡಿಗಳ ಧರ್ಮಶಾಲೆ ಮತ್ತು ದೀಕ್ಷಾ ಖೈರತ್ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿರುವುದಾಗಿ ಹೇಳಿದರು. ಅಲ್ಲದೆ ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೊಂಡಗಟ್ಟು ಅಂಜನ ಅವರ ಆಶೀರ್ವಾದ ಪಡೆಯುವುದು ಅಭ್ಯಾಸವಾಗಿಬಿಟ್ಟಿದೆ ಎಂದರು.
ನಂತರ, ಅವರು ನಾಚುಪಲ್ಲಿಯಲ್ಲಿ ಜನಸೇನಾ ಕಾರ್ಯಕರ್ತರನ್ನು ಭೇಟಿಯಾಗಿ ಮಧ್ಯಾಹ್ನ ಹೈದರಾಬಾದ್‌ಗೆ ಮರಳಿದರು. ಪವನ್ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಭದ್ರತೆಯನ್ನು ಏರ್ಪಡಿಸಿದ್ದಾರೆ.
ಇದೇ ಮೊದಲೇನಲ್ಲ
ಇನ್ನು ಪವನ್ ಕಲ್ಯಾಣ್ ಗೆ ವಿದ್ಯುತ್ ಅಪಘಾತ ಇದೇ ಮೊದಲೇನಲ್ಲ.. ಈ ಹಿಂದೆ ಅಂದರೆ ಸುಮಾರು ಎರಡು ದಶಕಗಳ ಹಿಂದೆ.. ಚುನಾವಣಾ ಪ್ರಚಾರದ ಸಮಯದಲ್ಲಿ, ಅವರು ಪ್ರಯಾಣಿಸುತ್ತಿದ್ದ ವಾಹನವು ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದು ಗಂಭೀರ ಅಪಘಾತಕ್ಕೀಡಾಗಿತ್ತು. ಆ ಸಮಯದಲ್ಲಿ, ಅವರು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದರು.
Advertisement