

ಗುವಾಹಟಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಈ ವರ್ಷದ ಮೊದಲಾರ್ಧದಲ್ಲಿ ಚುನಾವಣೆ ನಡೆಯಲಿರುವ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸುವುದಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಶನಿವಾರ ರಾತ್ರಿ ಘೋಷಿಸಿದರು.
ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಪಟ್ಟಿಗಳನ್ನು ಅಂತಿಮಗೊಳಿಸಲು ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿಗೆ ನಾಲ್ಕು ಸದಸ್ಯರ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಅಸ್ಸಾಂ ಕಾಂಗ್ರೆಸ್ ಘಟಕದ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ಇಲ್ಲಿ ಇತರ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿದೆ.
ಅವರ ಆಪ್ತ ಸಹಾಯಕರಾದ ಇಮ್ರಾನ್ ಮಸೂದ್ ಮತ್ತು ಸಪ್ತಗಿರಿ ಶಂಕರ್ ಉಲಕಾ, ಸಿರಿವೆಲ್ಲಾ ಪ್ರಸಾದ್ ಅವರನ್ನು ಅಸ್ಸಾಂ ಸ್ಕ್ರೀನಿಂಗ್ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.
126 ಸದಸ್ಯರ ಅಸ್ಸಾಂ ವಿಧಾನಸಭೆಗೆ ಈ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಕಳೆದ ತಿಂಗಳು, ಕಾಂಗ್ರೆಸ್, ಸಿಪಿಐ(ಎಂ), ರೈಜೋರ್ ದಳ, ಅಸ್ಸಾಂ ಜಾತಿಯ ಪರಿಷತ್ (ಎಜೆಪಿ), ಸಿಪಿಐ, ಸಿಪಿಐ(ಎಂಎಲ್) ಲಿಬರೇಶನ್, ಜಾತಿಯ ದಳ-ಅಸೋಮ್ (ಜೆಡಿಎ) ಮತ್ತು ಕರ್ಬಿ ಆಂಗ್ಲಾಂಗ್ ಮೂಲದ ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ (ಎಪಿಎಚ್‌ಎಲ್‌ಸಿ)ಗಳು ಒಟ್ಟಾಗಿ ವಿಧಾನಸಭಾ ಚುನಾವಣೆ ಎದುರಿಸಲು ಕೈಜೋಡಿಸಿದ್ದವು.
ಸದ್ಯ, 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿಯ ಬಲ 64 ಆಗಿದ್ದು, ಅದರ ಮಿತ್ರಪಕ್ಷಗಳಾದ ಎಜಿಪಿ ಒಂಬತ್ತು ಶಾಸಕರನ್ನು, ಯುಪಿಪಿಎಲ್ ಏಳು ಮತ್ತು ಬಿಪಿಎಫ್ ಮೂರು ಸದಸ್ಯರನ್ನು ಹೊಂದಿದೆ. ವಿರೋಧ ಪಕ್ಷದ ಶಿಬಿರದಲ್ಲಿ, ಕಾಂಗ್ರೆಸ್ ಬಲ 26, ಎಐಯುಡಿಎಫ್ 15 ಸದಸ್ಯರನ್ನು ಮತ್ತು ಸಿಪಿಐ(ಎಂ) ಒಬ್ಬ ಶಾಸಕನನ್ನು ಹೊಂದಿದೆ. ಸ್ವತಂತ್ರ ಶಾಸಕರೂ ಇದ್ದಾರೆ.
Advertisement