

ಲಖನೌ: ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿವಾದಾತ್ಮಕ ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ನಂತರ ಮಂಗಳವಾರ ಪ್ರಕಟವಾದ ಕರಡು ಮತದಾರರ ಪಟ್ಟಿಯಿಂದ ಒಟ್ಟು ಸುಮಾರು 2.89 ಕೋಟಿ ಮತದಾರರನ್ನು ತೆಗೆದುಹಾಕಲಾಗಿದೆ.
SIRನ ಆರಂಭಿಕ ಹಂತದ ನಂತರ ದೇಶದಲ್ಲಿ ಮತದಾರರ ಡಿಲೀಟ್ ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು ಎನ್ನಲಾಗಿದೆ.
ಮುಖ್ಯ ಚುನಾವಣಾ ಅಧಿಕಾರಿ(CEO) ನವದೀಪ್ ರಿನ್ವಾ ಅವರ ಪ್ರಕಾರ, ಈ ಹಿಂದೆ ಪಟ್ಟಿ ಮಾಡಲಾದ ಒಟ್ಟು 15.44 ಕೋಟಿ ಮತದಾರರಲ್ಲಿ ಉಳಿದ 12.55 ಕೋಟಿ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
"ಕರಡು ಮತದಾರರ ಪಟ್ಟಿಯು ಈಗ 12.55 ಕೋಟಿ ಮತದಾರರನ್ನು ಒಳಗೊಂಡಿದೆ ಮತ್ತು ರಾಜ್ಯದ ಎಲ್ಲಾ 75 ಜಿಲ್ಲೆಗಳು ಹಾಗೂ 403 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾವು, ಶಾಶ್ವತ ವಲಸೆ ಅಥವಾ ಹಲವು ನೋಂದಣಿಗಳಿಂದಾಗಿ 2.89 ಕೋಟಿ ಮತದಾರರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ ಎಂದು CEO ಹೇಳಿದ್ದಾರೆ.
ಮತದಾರರ ಪಟ್ಟಿಯಿಂದ ಅಳಿಸಲಾದವರ ಬಗ್ಗೆ ವಿವರಗಳನ್ನು ನೀಡಿದ ರಿನ್ವಾ, 46.23 ಲಕ್ಷ ಮತದಾರರು(ಶೇ. 2.99) ಮೃತಪಟ್ಟಿದ್ದಾರೆ ಎಂದು ಕಂಡುಬಂದಿದೆ. ಆದರೆ 2.57 ಕೋಟಿ ಮತದಾರರು(ಶೇ. 14.06) ಶಾಶ್ವತವಾಗಿ ವಲಸೆ ಹೋಗಿದ್ದಾರೆ ಅಥವಾ ಪರಿಶೀಲನಾ ಪ್ರಕ್ರಿಯೆಯಲ್ಲಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ 25.47 ಲಕ್ಷ ಮತದಾರರು(ಶೇ. 1.65) ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿರುವುದು ಕಂಡುಬಂದಿದೆ.
Advertisement