

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಬುಧವಾರ ಸಾವಿಗೀಡಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಲ್ಲಿನ ಅತಿಯಾದ ಕೆಲಸದ ಹೊರೆಯಿಂದಾಗಿಯೇ ಅವರು ಒತ್ತಡಕ್ಕೊಳಗಾಗಿದ್ದರು ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸಂಪ್ರೀತಾ ಚೌಧರಿ ಸನ್ಯಾಲ್ ಎಂದು ಗುರುತಿಸಲಾಗಿದ್ದು, ಅವರು 'ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಮತ್ತು ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೆ, ಅವರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ ಕೆಲಸ ಮುಂದುವರೆಸಿದರು' ಎಂದು ಅವರ ಪತಿ ಹೇಳಿದ್ದಾರೆ.
'SIR ಕೆಲಸದ ಹೊರೆ ಹೆಚ್ಚಾದಂತೆ ಅವರ ಸ್ಥಿತಿ ಹದಗೆಟ್ಟಿತು. ಬುಧವಾರ ಮುಂಜಾನೆ ಅವರು ನಮ್ಮ ನಿವಾಸದಲ್ಲಿ ನಿಧನರಾದರು' ಎಂದು ಅವರು ಹೇಳಿದರು.
ಸನ್ಯಾಲ್ ಅವರು ಐಸಿಡಿಎಸ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ಇಂಗ್ಲಿಷ್ ಬಜಾರ್ ಪುರಸಭೆ ಪ್ರದೇಶದ ಬೂತ್ ಸಂಖ್ಯೆ 163ರ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೃತರು ಫುಲ್ಬರಿ ಪಕುರ್ತಲಾ ಪ್ರದೇಶದ ನಿವಾಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಗಾಯತ್ರಿ ಘೋಷ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ, 'ಎಸ್ಐಆರ್ ಪ್ರಕ್ರಿಯೆಯ ಸಮಯದಲ್ಲಿ ಅತಿಯಾದ ಒತ್ತಡವು ಬಿಎಲ್ಒಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ' ಎಂದು ಆರೋಪಿಸಿದರು.
'ಯಾವುದೇ ಸಾವು ದುರದೃಷ್ಟಕರ. ಆದರೆ, ಎಲ್ಲ ಹೊಣೆಯನ್ನು ಚುನಾವಣಾ ಆಯೋಗದ ಮೇಲೆ ಹಾಕುವುದು ಸರಿಯಲ್ಲ' ಎಂದು ಬಿಜೆಪಿ ದಕ್ಷಿಣ ಮಾಲ್ಡಾ ಸಂಘಟನಾ ಜಿಲ್ಲಾಧ್ಯಕ್ಷ ಅಜಯ್ ಗಂಗೋಪಾಧ್ಯಾಯ ಹೇಳಿದರು.
ತೃಣಮೂಲ ಕಾಂಗ್ರೆಸ್ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳು ನಕಲಿ ಮತದಾರರನ್ನು ಅಳಿಸುವಂತೆ ಬಿಎಲ್‌ಒಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ನವೆಂಬರ್ ಮೊದಲ ವಾರದಲ್ಲಿ ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ಮೊದಲ ಬಿಎಲ್‌ಒ ಸಾವು ವರದಿಯಾಗಿದೆ. ಅದಾದ ಹತ್ತು ದಿನಗಳ ನಂತರ, ಉತ್ತರ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಎರಡನೇ ಪ್ರಕರಣ ಸಂಭವಿಸಿತು. ಅಲ್ಲಿ ಒಬ್ಬ ಮಹಿಳಾ ಬಿಎಲ್‌ಒ ಆತ್ಮಹತ್ಯೆ ಮಾಡಿಕೊಂಡರು. ನವೆಂಬರ್ 21 ರಂದು, ನಾಡಿಯಾ ಜಿಲ್ಲೆಯಲ್ಲಿ ಬಿಎಲ್‌ಒ ಆತ್ಮಹತ್ಯೆ ಮಾಡಿಕೊಂಡ ಮೂರನೇ ಘಟನೆ ನಡೆಯಿತು.
ನಾಲ್ಕನೇ ಸಾವು ಮುರ್ಷಿದಾಬಾದ್ ಜಿಲ್ಲೆಯಿಂದ ವರದಿಯಾಗಿದ್ದು, ಅಲ್ಲಿ ಒಬ್ಬ ಬಿಎಲ್‌ಒ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಡಿಸೆಂಬರ್ 28 ರಂದು, ಐದನೇ ಬಿಎಲ್‌ಒ ಬಂಕುರಾ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಆರನೇ ಪ್ರಕರಣ ಕಳೆದ ಶನಿವಾರ ಕೂಚ್ ಬೆಹಾರ್‌ನಲ್ಲಿ ವರದಿಯಾಗಿದೆ.
Advertisement