

ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದ ಸೈಯದ್ ಫೈಜ್ ಇಲಾಹಿ ಮಸೀದಿ ಬಳಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯ ವೇಳೆ ಭುಗಿಲೆದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಮಸೀದಿಗೆ ಹೊಂದಿಕೊಂಡಿರುವ ಭೂಮಿ ಮತ್ತು ಹತ್ತಿರದ ಸ್ಮಶಾನ ಪ್ರದೇಶದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾಗ ಕೆಲವರು ಪೊಲೀಸರ ಮೇಲೆ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ಎಸೆದಿದ್ದರು. ಘಟನೆಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ದೆಹಲಿ ಹೈಕೋರ್ಟ್‌ನ ನಿರ್ದೇಶನದಂತೆ ಎಂಸಿಡಿ ಅಧಿಕಾರಿಗಳು ಮಸೀದಿಗೆ ಹೊಂದಿಕೊಂಡಿರುವ ಭೂಮಿ ಮತ್ತು ತುರ್ಕಮನ್ ಗೇಟ್‌ನಲ್ಲಿರುವ ಹತ್ತಿರದ ಸ್ಮಶಾನದಲ್ಲಿ ಅತಿಕ್ರಮಣ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಕಾರ್ಯಾಚರಣೆಯ ಸಮಯದಲ್ಲಿ ಮಸೀದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಎಂಸಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 20 ರಿಂದ 25 ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಲ್ಲಿ ಐದು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲ್ಲು ತೂರಾಟ ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂಸಾಚಾರವು ತೆರವು ಕಾರ್ಯಾಚರಣೆಯನ್ನು ಅಡ್ಡಿಪಡಿಸಲು ಪೂರ್ವ ಯೋಜಿತ ಪ್ರಯತ್ನವಾಗಿದೆಯೇ ಎಂಬದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕಲ್ಲು ತೂರಾಟದಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣ, ಸಿಸಿಟಿವಿ ದೃಶ್ಯ ಹಾಗೂ ಬಾಡಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ವಿಡಿಯೋಗಳನ್ನು ವಿಶ್ಲೇಷಿಸಲಾಗುತ್ತಿದೆ. ತನಿಖೆಯ ಭಾಗವಾಗಿ ಸಾಕ್ಷಿಗಳು ಮತ್ತು ಬಂಧಿತ ವ್ಯಕ್ತಿಗಳ ಹೇಳಿಕೆಗಳನ್ನು ಸಹ ದಾಖಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಗುಂಪು ಸೇರಿದ್ದವರನ್ನು ಚದುರಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಅಶ್ರುವಾಯು ಶೆಲ್‌ಗಳನ್ನು ಬಳಸಲಾಯಿತು. ನಂತರಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನೆ ಸಂಬಂಧ ಬಿಎನ್‌ಎಸ್ ಮತ್ತು 3 ಪಿಡಿಪಿಪಿ ಕಾಯ್ದೆ -1984 ರ ಸೆಕ್ಷನ್ 221/132/121/191(2)/191(3), 223 (ಎ)/ 3(5) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ಅವರು ಮಾತನಾಡಿ ಜನವರಿ 6 ಮತ್ತು 7 ರ ಮಧ್ಯರಾತ್ರಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.ಸುಮಾರು 30 ಬುಲ್ಡೋಜರ್‌ಗಳು ಮತ್ತು 50 ಡಂಪರ್‌ಗಳನ್ನು ನಿಯೋಜಿಸಲಾಗಿತ್ತು. 300 ಕ್ಕೂ ಹೆಚ್ಚು ಎಂಸಿಡಿ ಕಾರ್ಯಕರ್ತರು ಮತ್ತು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದರು, ರಾತ್ರಿಯಿಡೀ ಕಾರ್ಯಾಚರಣೆ ಮುಂದುವರೆಯಿತು.
ಜೆಸಿಬಿಗಳು ಸೇರಿದಂತೆ ಎಂಸಿಡಿ ಯಂತ್ರೋಪಕರಣಗಳು ಸ್ಥಳಕ್ಕೆ ಬರುತ್ತಿದ್ದಂತೆ 100-150 ಜನರು ಸ್ಥಳಕ್ಕೆ ಬಂದರು. ಈ ವೇಳೆ ಶಾಂತಿ ಸಭೆ ನಡೆಸಲಾಯಿತು. ಮನವೊಲಿಸಿದ ಬಳಿಕ ಹಲವರು ಹೊರಟು ಹೋದರು. ಆದರೆ, ಕೆಲವರು ಗದ್ದವ ಸೃಷ್ಟಿಸಲು ಯತ್ನಿಸಿದರು. ಕಲ್ಲು ತೂರಾಟ ನಡೆಸಿದರು. ಈ ವೇಳೆ ಐವರು ಪೊಲೀಸರು ಗಾಯಗೊಂಡಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ. ಇದೇ ವೇಳೆ ಜನರನ್ನು ಚದುರಿಸಲು ಅಶ್ರುವಾಯು ಬಳಸಲಾಯಿತು ಎಂದು ಮಾಹಿತಿ ನೀಡಿದರು.
ವೈದ್ಯಕೀಯ ವರದಿಗಳು ಮತ್ತು ಹೇಳಿಕೆಗಳನ್ನು ದಾಖಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು, ಸಿಸಿಟಿವಿ ದೃಶ್ಯಾವಳಿಗಳನ್ನೂ ಕೂಡ ವಿಶ್ಲೇಷಿಸಲಾಗುತ್ತಿದೆ ಎಂದು ಹೇಳಿದರು.
ನ್ಯಾಯಾಲಯವು ಅತಿಕ್ರಮಣ ಎಂದು ಘೋಷಿಸಿದ ಫೈಜ್-ಎ-ಇಲಾಹಿ ಮಸೀದಿ ಬಳಿಯಿರುವ ಕೆಲ ಕಟ್ಟಡಗಳನ್ನು ಕೆಲವಲು ಎಂಸಿಡಿ ಮುಂದಾಗಿತ್ತು. ಇದರಂತೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭದ್ರತೆ ಕೋರಿತ್ತು. ಮಾಹಿತಿ ಪಡೆದ ತಕ್ಷಣ, ಪೊಲೀಸರು ಸ್ಥಳೀಯ ನಿವಾಸಿಗಳನ್ನು ಸಂಪರ್ಕಿಸಿ ತೆರವು ಕಾರ್ಯಾಚರಣೆ ಕಾನೂನು ಕ್ರಮವಾಗಿದೆ ಎಂದು ತಿಳಿಸಿದ್ದರು.
ಹೈಕೋರ್ಟ್ ಆದೇಶದ ಅನುಸಾರವಾಗಿ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು, ಸುಮಾರು 36,000 ಚದರ ಅಡಿ ಅತಿಕ್ರಮಣ ಪ್ರದೇಶವನ್ನು ತೆರವುಗೊಳಿಸಲಾಯಿತು ಎಂದು ಎಂಸಿಡಿಯ ಉಪ ಆಯುಕ್ತ ವಿವೇಕ್ ಕುಮಾರ್ ಅವರು ಹೇಳಿದ್ದಾರೆ.
ಸುಮಾರು 200 ರಿಂದ 250 ವಾಹನಗಳಲ್ಲಿ ತುಂಬುವಷ್ಟು ಅವಶೇಷಗಳು ಇನ್ನೂ ಸ್ಥಳದಲ್ಲಿ ಬಿದ್ದಿದ್ದು, ಸ್ವಚ್ಛತಾ ಕಾರ್ಯಾಚರಣೆಯ ಭಾಗವಾಗಿ ಅವುಗಳನ್ನು ತೆಗೆದುಹಾಕಲಾಗುವುದು. ಕಾರ್ಯಾಚರಣೆಯ ಸಮಯದಲ್ಲಿ ಮಸೀದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement