

ಹೈದರಾಬಾದ್: ತೆಲಂಗಾಣ ವಿಧಾನ ಪರಿಷತ್‌ನ ಸಭಾಪತಿ ಗುಠಾ ಸುಖೇಂದ್ರ ರೆಡ್ಡಿ ಅವರು ಅಮಾನತುಗೊಂಡಿರುವ ಬಿಆರ್‌ಎಸ್ ಎಂಎಲ್‌ಸಿ ಕೆ. ಕವಿತಾ ಅವರು ಪರಿಷತ್ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಕವಿತಾ ಅವರ ರಾಜೀನಾಮೆಯನ್ನು ಜನವರಿ 6 ರಿಂದ ಜಾರಿಗೆ ಬರುವಂತೆ ಸಭಾಪತಿ ಅಂಗೀಕರಿಸಿದ್ದಾರೆ ಎಂದು ಪರಿಷತ್ತಿನ ಕಾರ್ಯದರ್ಶಿ ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಕವಿತಾ ಅವರು 2021 ರಲ್ಲಿ ನಿಜಾಮಾಬಾದ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಕಳೆದ ವರ್ಷ ಸೆಪ್ಟೆಂಬರ್ 3 ರಂದು ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ರಾಜೀನಾಮೆಯನ್ನು ಅಂಗೀಕರಿಸಿರಲಿಲ್ಲ.
ಜನವರಿ 5 ರಂದು ಪರಿಷತ್ತಿನಲ್ಲಿ ಮಾತನಾಡಿದ ಅವರು, ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಸಭಾಪತಿಯನ್ನು ಒತ್ತಾಯಿಸಿದರು.
ತಮ್ಮ ಭಾಷಣದ ಸಮಯದಲ್ಲಿ, ಕವಿತಾ ತಮ್ಮ ತಂದೆ ಕೆ ಚಂದ್ರಶೇಖರ್ ರಾವ್ ನೇತೃತ್ವದ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದ ಸಮಯದಲ್ಲಿ ಪಕ್ಷವು ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ ಅವರು, ಬಿಆರ್‌ಎಸ್ ಸಂವಿಧಾನವನ್ನು 'ತಮಾಷೆ' ಎಂದು ಕರೆದರು. ಕೆಲವು ಜನಪ್ರಿಯವಲ್ಲದ ನಿರ್ಧಾರಗಳಿಂದ ದೂರ ಉಳಿದಿದ್ದೆ, ಅವುಗಳನ್ನು ತೆಗೆದುಕೊಳ್ಳುವಲ್ಲಿ ನಾನು ಭಾಗಿಯಾಗಿಲ್ಲ ಎಂದು ಹೇಳಿದರು.
ಬಿಆರ್‌ಎಸ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯ ಬಗ್ಗೆ ಕವಿತಾ ಅವರ ಸೋದರಸಂಬಂಧಿಗಳು ಮತ್ತು ಪಕ್ಷದ ನಾಯಕರಾದ ಟಿ ಹರೀಶ್ ರಾವ್ ಮತ್ತು ಜೆ ಸಂತೋಷ್ ಕುಮಾರ್ ಅವರು ತಮ್ಮ ತಂದೆ ಕೆಸಿಆರ್ ಅವರ ಪ್ರತಿಷ್ಠೆಗೆ 'ಕಳಂಕ ತಂದಿದ್ದಾರೆ' ಎಂದು ಆರೋಪಿಸಿದ ನಂತರ ಅವರನ್ನು 2025ರ ಸೆಪ್ಟೆಂಬರ್‌ನಲ್ಲಿ ಬಿಆರ್‌ಎಸ್‌ನಿಂದ ಅಮಾನತುಗೊಳಿಸಲಾಯಿತು.
ಅಮಾನತುಗೊಂಡ ನಂತರ, ಅವರು ತಮ್ಮ ನೇತೃತ್ವದ ಸಾಂಸ್ಕೃತಿಕ ಸಂಘಟನೆಯಾದ ತೆಲಂಗಾಣ ಜಾಗೃತಿಯ ಅಡಿಯಲ್ಲಿ ಸಾರ್ವಜನಿಕ ಸಮಸ್ಯೆಗಳತ್ತ ಗಮನಹರಿಸುತ್ತಿದ್ದಾರೆ.
ಕವಿತಾ ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ರಾಜಕೀಯ ವೇದಿಕೆಯು ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
Advertisement