

ಕೋಲ್ಕತ್ತಾ: ಜಾರಿ ನಿರ್ದೇಶನಾಲಯ(ಇಡಿ) ಗುರುವಾರ I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿ, ತೀವ್ರ ಶೋಧ ನಡೆಸಿದ್ದು, ಇದನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ದಾಳಿ ವೇಳೆ ಟಿಎಂಸಿಯ ಹಾರ್ಡ್ ಡಿಸ್ಕ್‌ಗಳು, ಆಂತರಿಕ ದಾಖಲೆಗಳು ಮತ್ತು ಸೂಕ್ಷ್ಮ ಸಾಂಸ್ಥಿಕ ದತ್ತಾಂಶಗಳನ್ನು ವಶಪಡಿಸಿಕೊಳ್ಳಲು ಇಡಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪ್ರತೀಕ್ ಜೈನ್ ಅವರ ನಿವಾಸದ ಮೇಲಿನ ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಮತ್ತು ಸಂವಿಧಾನಬಾಹಿರ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಐ-ಪ್ಯಾಕ್ ತೃಣಮೂಲ ಕಾಂಗ್ರೆಸ್‌ನ ಐಟಿ ಸೆಲ್ ಅನ್ನು ನೋಡಿಕೊಳ್ಳುತ್ತದೆ.
ಇಂದು ಬೆಳಿಗ್ಗೆಯಿಂದ ಇಡಿ ಶೋಧ ನಡೆಸುತ್ತಿರುವ ಪ್ರತೀಕ್ ಜೈನ್ ಅವರ ಲೌಡನ್ ಸ್ಟ್ರೀಟ್ ನಿವಾಸದಿಂದ ಹೊರಬಂದ ನಂತರ ಮಮತಾ ಬ್ಯಾನರ್ಜಿ ಈ ಆರೋಪಗಳನ್ನು ಮಾಡಿದ್ದಾರೆ.
ಜೈನ್ ಮುಖ್ಯಸ್ಥರಾಗಿರುವ ಭಾರತೀಯ ರಾಜಕೀಯ ಕ್ರಿಯಾ ಸಮಿತಿ(ಐ-ಪ್ಯಾಕ್) ಕಚೇರಿಯಲ್ಲೂ ಇಡಿ ಶೋಧ ನಡೆಸುತ್ತಿದೆ.
ಆಡಳಿತ ಪಕ್ಷದ ಆಂತರಿಕ ಕಾರ್ಯತಂತ್ರ, ಅಭ್ಯರ್ಥಿಗಳ ಪಟ್ಟಿ ಮತ್ತು ಗೌಪ್ಯ ಡಿಜಿಟಲ್ ಸಾಮಗ್ರಿಗಳನ್ನು ಪಡೆಯಲು ಇಡಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಬ್ಯಾನರ್ಜಿ, ಅಂತಹ ಮಾಹಿತಿಗೂ ಹಣಕಾಸಿನ ತನಿಖೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
"ಅವರು ನಮ್ಮ ಪಕ್ಷದ ಹಾರ್ಡ್ ಡಿಸ್ಕ್, ತಂತ್ರ ಮತ್ತು ಯೋಜನೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ದಾಖಲೆಗಳನ್ನು ಸಂಗ್ರಹಿಸುವುದು ಇಡಿ ಕರ್ತವ್ಯವೇ?" ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ ಮತ್ತು ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.
"ಈ ಪ್ರಕ್ರಿಯೆಯು ಬೆದರಿಕೆಯ ಕೃತ್ಯ ಎಂದು ಟೀಕಿಸಿದ ಬ್ಯಾನರ್ಜಿ," ಇಡಿ, ಕಾನೂನು ಜಾರಿ ಸಂಸ್ಥೆಯಲ್ಲ, ಇದು ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳುತ್ತಿರುವ ಸಂಸ್ಥೆ. ಕೇಂದ್ರ ಗೃಹ ಸಚಿವರು ದೇಶವನ್ನು ರಕ್ಷಿಸುವ ವ್ಯಕ್ತಿಯಲ್ಲ, ಅತ್ಯಂತ ನೀಚ ಗೃಹ ಸಚಿವರಂತೆ ವರ್ತಿಸುತ್ತಿದ್ದಾರೆ" ಎಂದು ಕಿಡಿ ಕಾರಿದ್ದಾರೆ.
ಮಮತಾ ಬ್ಯಾನರ್ಜಿ ಆರೋಪದ ಬಗ್ಗೆ ED ಅಥವಾ I-PAC ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
Advertisement