

ಕೋಲ್ಕತ್ತಾ: ಐ-ಪ್ಯಾಕ್ ಮುಖ್ಯಸ್ಥ ಮತ್ತು ಟಿಎಂಸಿಯ ಐಟಿ ಸೆಲ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಕೇಂದ್ರ ತನಿಖಾ ಸಂಸ್ಥೆ ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನಿಖಾ ಪ್ರಕ್ರಿಯೆಗೆ "ಅಡ್ಡಿಪಡಿಸಿದ್ದಾರೆ" ಮತ್ತು ಪ್ರಮುಖ ಸಾಕ್ಷ್ಯಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದೆ.
ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಸಿಎಂ ತಮ್ಮ ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಐ-ಪ್ಯಾಕ್ ಮುಖ್ಯಸ್ಥರ ನಿವಾಸ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ಐ-ಪ್ಯಾಕ್ ಮುಖ್ಯಸ್ಥರ ನಿವಾಸದಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು.
ಸಿಎಂ ಮಮತಾ ಅವರು ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳೊಂದಿಗೆ ಆಗಮಿಸುವವರೆಗೆ ಮತ್ತು ಭೌತಿಕ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಕದ್ದೊಯ್ಯುವವರೆಗೆ ಪ್ರಕ್ರಿಯೆಗಳು ಶಾಂತಿಯುತವಾಗಿ ಮತ್ತು ವೃತ್ತಿಪರವಾಗಿ ನಡೆದಿದ್ದವು ಎಂದು ಇಡಿ ಹೇಳಿದೆ.
ಐ-ಪ್ಯಾಕ್ ಕಂಪನಿಯ ವಿರುದ್ಧ ಗಂಭೀರ ಆರೋಪಗಳಿದ್ದು, ಕಲ್ಲಿದ್ದಲು ಕಳ್ಳಸಾಗಣೆಗೆ ಸಂಬಂಧಿಸಿದ ಹವಾಲಾ ನಿರ್ವಾಹಕನೊಬ್ಬ ನೋಂದಾಯಿತ ಕಂಪನಿಯಾದ ಇಂಡಿಯನ್ ಪಿಎಸಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಹತ್ತಾರು ಕೋಟಿ ರೂಪಾಯಿಗಳ ವಹಿವಾಟನ್ನು ಸುಗಮಗೊಳಿಸಿದ್ದಾನೆ ಎಂದು ಇಡಿ ಆರೋಪಿಸಿದೆ.
"ಐ-ಪ್ಯಾಕ್ ಕೂಡ ಹವಾಲಾ ಹಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಒಂದಾಗಿದೆ" ಎಂದು ಇಡಿ ಆರೋಪಿಸಿದೆ.
ಮಮತಾ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರ ಕ್ರಮಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA)ಯ ನಿಬಂಧನೆಗಳ ಪ್ರಕಾರ ನಡೆಯುತ್ತಿರುವ ತನಿಖೆ ಮತ್ತು ಪ್ರಕ್ರಿಯೆಗಳಿಗೆ "ಅಡ್ಡಿಪಡಿಸಿದ್ದಾರೆ" ಎಂದು ಇಡಿ ಹೇಳಿದೆ.
"ಇಡಿ ಶೋಧ ಸಾಕ್ಷ್ಯಾಧಾರಿತವಾಗಿದೆ ಮತ್ತು ಯಾವುದೇ ರಾಜಕೀಯ ಸಂಸ್ಥೆಯನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಕೇಂದ್ರ ತನಿಖಾ ಸಂಸ್ಥೆ ಸ್ಪಷ್ಟಪಡಿಸಿದೆ.
ಯಾವುದೇ ಪಕ್ಷದ ಕಚೇರಿಯನ್ನು ಶೋಧಿಸಲಾಗಿಲ್ಲ. ಈ ಶೋಧವು ಯಾವುದೇ ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ಅಕ್ರಮ ಹಣ ವರ್ಗಾವಣೆಯ ವಿರುದ್ಧ ನಿಯಮಿತ ಕ್ರಮದ ಭಾಗವಾಗಿದೆ. ಇದನ್ನು ಕಟ್ಟುನಿಟ್ಟಾಗಿ ಸ್ಥಾಪಿತ ಕಾನೂನು ಸುರಕ್ಷತೆಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ" ಎಂದು ED ಹೇಳಿದೆ.
ಇದಕ್ಕೆ ಪ್ರತಿಯಾಗಿ ಪ್ರತೀಕ್ ಜೈನ್ ಅವರ ಕುಟುಂಬ ಸಹ ಇಡಿ ದಾಳಿಯ ವಿರುದ್ಧ ಹೈಕೋರ್ಟ್ ಮೊರೆ ಹೋಗಿದೆ. ಅಲ್ಲದೆ ದಾಳಿಯ ಸಮಯದಲ್ಲಿ ಪ್ರಮುಖ ದಾಖಲೆಗಳ ಕಳ್ಳತನವಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದೆ.
"ದಾಳಿ ನಡೆದ ಸ್ವಲ್ಪ ಸಮಯದ ನಂತರ, ಪ್ರತೀಕ್ ಜೈನ್ ಅವರ ಪತ್ನಿ ಶೇಕ್ಸ್‌ಪಿಯರ್ ಸರಾನಿ ಪೊಲೀಸ್ ಠಾಣೆಯಲ್ಲಿ ಇಡಿಯಿಂದ ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ದಾಳಿಯ ಸಮಯದಲ್ಲಿ ಅವರ ಮನೆಯಿಂದ ಅಗತ್ಯ ದಾಖಲೆಗಳನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ನ್ಯಾಯಾಲಯವು ಶುಕ್ರವಾರ ಎರಡೂ ಪ್ರಕರಣಗಳ ವಿಚಾರಣೆ ನಡೆಸಲಿದೆ.
ಏತನ್ಮಧ್ಯೆ, ಇಡಿ ದಾಳಿಗಳನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ನಾಳೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
Advertisement