

ನವದೆಹಲಿ: ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ) ಬದಲಿಗೆ ವಿಬಿ ಜಿ- ರಾಮ್- ಜಿ ಕಾಯ್ದೆ ಜಾರಿ ಮಾಡಿರುವ ವಿರುದ್ಧ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಮನ್ರೇಗಾ ಬಚಾವೋ ಸಂಗ್ರಾಮ ಹೋರಾಟವನ್ನು ಆರಂಭಿಸಿದೆ.
ಫೆ. 25ರ ತನಕ 45 ದಿನಗಳ ಕಾಲ ದೇಶಾದ್ಯಂತ ಪ್ರತಿಭಟನೆ ನಡೆಯಲಿದ್ದು, ಶನಿವಾರ ಎಲ್ಲಾ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಹೋರಾಟಕ್ಕೆ ಚಾಲನೆ ದೊರೆಯಿತು. ವಿಬಿ ಜಿ- ರಾಮ್- ಜಿ ಕಾಯ್ದೆಯನ್ನು ರದ್ದುಗೊಳಿಸಬೇಕು. MGNREGA ಅನ್ನು ಅದರ ಮೂಲ ರೂಪದಲ್ಲಿ ಹಕ್ಕು-ಆಧಾರಿತ ಕಾನೂನಾಗಿ ಮರುಸ್ಥಾಪಿಸಬೇಕು ಎಂಬುದು ವಿಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮನ್ರೇಗಾವನ್ನು ರದ್ದುಗೊಳಿಸಿ ಅದರ ಬದಲಿಗೆ ವಿಬಿ-ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದ ವಿಧಾನವನ್ನು ಶನಿವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿರೋಧಿಸಲಾಯಿತು. ಜ.11ರಂದು ಜಿಲ್ಲಾಕೇಂದ್ರಗಳಲ್ಲಿ ಅಹೋರಾತ್ರಿ ಉಪವಾಸ ಹಾಗೂ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತದೆ.
ನರೇಂದ್ರ) ಮೋದಿ ಸರ್ಕಾರ ಬುಲ್ಡೋಜರ್ ಧ್ವಂಸದಿಂದ ಕಸಿದುಕೊಂಡಿರುವ MGNREGA ಕೆಲಸ, ಜೀವನೋಪಾಯ ಮತ್ತು ಹೊಣೆಗಾರಿಕೆಯ ಹಕ್ಕುಗಳನ್ನು ಮರುಸ್ಥಾಪಿಸುವವರೆಗೆ ಈ ಹೋರಾಟ ಮಾಡಲು ಕಾಂಗ್ರೆಸ್ ಬದ್ಧವಾಗಿದೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಜನವರಿ 12 ರಿಂದ 29 ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜನಸಂಪರ್ಕ ಕಾರ್ಯಕ್ರಮ ನಡೆಯಲಿದೆ. ನಂತರ ಜನವರಿ 30 ರಂದು ವಾರ್ಡ್ ಮಟ್ಟದ ಶಾಂತಿಯುತ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ.
ಫೆಬ್ರವರಿ 7 ರಿಂದ 15 ರವರೆಗೆ, ರಾಜ್ಯ ಮಟ್ಟದ ವಿಧಾನ ಸಭೆಗಳಿಗೆ ಮುತ್ತಿಗೆ ಹಾಕಲಾಗುತ್ತಿದ್ದು, ಫೆ.16 ಮತ್ತು 25ರ ನಡುವೆ ನಾಲ್ಕು ಪ್ರಮುಖ ರ್ಯಾಲಿಗಳನ್ನು ನಡೆಸಲಾಗುವುದು. ವಿಬಿ-ಜಿ ರಾಮ್ ಜಿ ಕಾನೂನನ್ನು ಸಂಪೂರ್ಣವಾಗಿ ಹಿಂಪಡೆಯಲು ಮತ್ತು ಮನ್ರೇಗಾ ಮರುಸ್ಥಾಪನೆ ಪ್ರಮುಖ ಬೇಡಿಕೆಯಾಗಿದೆ ಎಂದು ಪಕ್ಷ ತಿಳಿಸಿದೆ.
Advertisement