

ನವದೆಹಲಿ: ಭಾರತದ ವಿಶ್ವಾಸಾರ್ಹ ಕಾರ್ಯನಿರತ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ-ಸಿ62) ಇಸ್ರೋ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದೆ. ಆದರೆ, ಕೊನೆಯ ಹಂತದಲ್ಲಿ ಸಮಸ್ಯೆಗಳು ಕಂಡು ಬಂದಿದ್ದು, ಇಸ್ರೋ ತಂಡ ಟೆನ್ಶನ್ನಲ್ಲಿ ಮುಳಗಿದೆ.
ಈ ಕುರಿತು ಇಸ್ರೋ ಅಧ್ಯಕ್ಷರಾದ ವಿ. ನಾರಾಯಣನ್ ಪ್ರತಿಕ್ರಿಯಿಸಿದ್ದು, “PSLV-C62 ಅನ್ನು ನಿಗದಿತ ಸಮಯಕ್ಕೆ ಉಡಾವಣೆ ಮಾಡಲಾಯಿತು. ಮೂರನೇ ಹಂತದ ವಿಭಜನೆವರೆಗೆ ಎಲ್ಲವೂ ಯೋಜನೆಯಂತೆ ನಡೆಯಿತು. ಆದರೆ ಮೂರನೇ ಹಂತದ ಅಂತ್ಯದಲ್ಲಿ ಸಮಸ್ಯೆಗಳು ಕಂಡುಬಂದವು. ಹಾರಾಟದ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದೆ. ಡೇಟಾವನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ವೇದಿಕೆಯಿಂದ ಬೆಳಿಗ್ಗೆ 10:18ಕ್ಕೆ ರಾಕೆಟ್ ಉಡಾವಣೆಗೊಂಡಿತು. ಇದು 2026ರ ಮೊದಲ ಉಪಗ್ರಹ ಉಡಾವಣೆಯಾಗಿದ್ದು, ಪಿಎಸ್‌ಎಲ್‌ವಿ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುವ ಉದ್ದೇಶವನ್ನು ಇಸ್ರೋ ಹೊಂದಿತ್ತು.
2025ರ ಮೇನಲ್ಲಿ ನಡೆದ PSLV-C61 ಮಿಷನ್ ಕೂಡ ಮೂರನೇ ಹಂತದಲ್ಲಿ ಒತ್ತಡದ ಬದಲಾವಣೆಯಿಂದ ತಾಂತ್ರಿಕ ದೋಷವನ್ನು ಎದುರಿಸಿತ್ತು. ಉಡಾವಣೆಗೆ ಮುನ್ನ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಶನಿವಾರ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು.
PSLV-C62 ರಾಕೆಟ್‌ನಲ್ಲಿ EOS-N1 (ಅನ್ವೇಶ್) ಎಂಬ ಉನ್ನತ ಭೂಪರಿವೀಕ್ಷಣಾ ಉಪಗ್ರಹವಿದ್ದು, ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದೆ. ಈ ಉಪಗ್ರಹವು ರಕ್ಷಣಾತ್ಮಕ ಉದ್ದೇಶಗಳ ಜೊತೆಗೆ ಕೃಷಿ, ನಗರ ಯೋಜನೆ ಮತ್ತು ಪರಿಸರ ಮೇಲ್ವಿಚಾರಣೆ ಸೇರಿದಂತೆ ನಾಗರಿಕ ಬಳಕೆಗೆ ಸಹ ಉಪಯುಕ್ತವಾಗಿದೆ.
ಈ ಮಿಷನ್ ಪಿಎಸ್‌ಎಲ್‌ವಿಯ 64ನೇ ಹಾರಾಟವಾಗಿದ್ದು, PSLV-DL ರೂಪಾಂತರದ ಐದನೇ ಮಿಷನ್ ಆಗಿತ್ತು. ಜೊತೆಗೆ ಇಸ್ರೋ ತನ್ನ 101ನೇ ಕಕ್ಷಾ ಉಡಾವಣೆಯನ್ನು ಈ ಮೂಲಕ ಆಚರಿಸುವ ಗುರಿಯನ್ನೂ ಹೊಂದಿತ್ತು. ರಾಕೆಟ್ 260 ಟನ್ ತೂಕವಿದ್ದು, 44.4 ಮೀಟರ್ ಎತ್ತರ ಹೊಂದಿತ್ತು. ಇದು 505.291 ಕಿಲೋಮೀಟರ್ ಎತ್ತರದ ಕಕ್ಷೆ ತಲುಪಬೇಕಿತ್ತು.
EOS-N1 ಜೊತೆಗೆ, ದೇಶಿ ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳ 15 ಸಹ-ಪ್ರಯಾಣಿಕ ಉಪಗ್ರಹಗಳು ಮಿಷನ್‌ನಲ್ಲಿ ಸೇರಿದ್ದವು. ಇದರಲ್ಲಿ ಸ್ಪೇನ್‌ನ ಸ್ಟಾರ್ಟ್‌ಅಪ್ ಸಂಸ್ಥೆಯ Kestrel Initial Technology Demonstrator (KID) ಕೂಡ ಸೇರಿದೆ. ಈ ಕ್ಯಾಪ್ಸುಲ್ ಅನ್ನು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಜಲಾವತರಣಗೊಳಿಸುವ ಯೋಜನೆ ಇತ್ತು.
ಮಿಷನ್ ಯೋಜನೆಯ ಪ್ರಕಾರ, EOS-N1 ಮತ್ತು 14 ಉಪಗ್ರಹಗಳನ್ನು ಸೂರ್ಯ-ಸಮಸಮಯ ಕಕ್ಷೆ (Sun-synchronous orbit) ಯಲ್ಲಿ ಸ್ಥಾಪಿಸಬೇಕಿತ್ತು. ನಾಲ್ಕನೇ ಹಂತವು KID ಕ್ಯಾಪ್ಸುಲ್ ಅನ್ನು ಮರುಪ್ರವೇಶ ಪಥಕ್ಕೆ ತಳ್ಳಬೇಕಾಗಿತ್ತು.
ಚಂದ್ರಯಾನ-1, ಮಂಗಳಯಾನ, ಆದಿತ್ಯ-L1, ಆಸ್ಟ್ರೋಸಾಟ್ ಸೇರಿದಂತೆ ಹಲವು ಯಶಸ್ವಿ ಮಿಷನ್‌ಗಳನ್ನು ನೆರವೇರಿಸಿರುವ ಪಿಎಸ್‌ಎಲ್‌ವಿ, 2017ರಲ್ಲಿ ಒಂದೇ ಮಿಷನ್‌ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವದಾಖಲೆ ಬರೆದಿತ್ತು.
Advertisement