

ಜೈಪುರ: ಗಂಟೆಗಟ್ಟಲೆ ಶಾಪಿಂಗ್ ಪೋಸ್ ಬಳಿಕ ಏನನ್ನೂ ಖರೀದಿಸದೇ ಹೋಗುತ್ತಿದ್ದ ಗ್ರಾಹಕಿಯ ಕಾಲಿಗೆ ಬಿದ್ದು ಏನಾದರೂ ಖರೀದಿಸಿ ಎಂದು ಮಹಿಳಾ ವ್ಯಾಪಾರಿಯೊಬ್ಬರು ಕಣ್ಣೀರು ಹಾಕುತ್ತಾ ಗೋಗರೆಯುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.."ಗ್ರಾಹಕರೇ ದೇವರು" ಎಂಬ ಮಾತನ್ನು ಪ್ರಶ್ನಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಒಬ್ಬ ಗ್ರಾಹಕ ತನ್ನ ಅಂಗಡಿಯ ಸರಕುಗಳನ್ನು ಗಂಟೆಗಟ್ಟಲೆ ನೋಡಿದ ನಂತರ ಏನನ್ನೂ ಖರೀದಿಸದೆ ಹಿಂತಿರುಗಿದಾಗ ಮಹಿಳಾ ಅಂಗಡಿಯವರು ಕಣ್ಣೀರು ಹಾಕಿದ್ದಾರೆ. ಆ ಮಹಿಳೆ ಮಹಿಳಾ ಗ್ರಾಹಕಿಯ ಕಾಲಿಗೆ ಬಿದ್ದು ಮಾರಾಟಕ್ಕಾಗಿ ಮಾತ್ರವಲ್ಲ, ತನ್ನ ಕಠಿಣ ಪರಿಶ್ರಮಕ್ಕೆ ಬೆಲೆ ನೀಡುವಂತೆ ಬೇಡಿಕೊಳ್ಳುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಸಣ್ಣ ಅಂಗಡಿಯವರ ದುಃಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಇಷ್ಟಕ್ಕೂ ಆಗಿದ್ದೇನು? ಎಲ್ಲಿಯ ವಿಡಿಯೋ ಇದು?
ಜೈಪುರದಲ್ಲಿ ಸಣ್ಣ ಪ್ರಮಾಣದ ಮಹಿಳಾ ಅಂಗಡಿಯವಳು ಕಣ್ಣೀರು ಸುರಿಸುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಸಣ್ಣ ಅಂಗಡಿಗೆ ಬಂದ ಮಹಿಳಾ ಗ್ರಾಹಕಿ ಅಂಗಡಿಯಲ್ಲಿದ್ದ ಮಹಿಳಾ ವ್ಯಾಪಾರಿಗೆ ತನ್ನಲ್ಲಿರುವ ವಸ್ತುಗಳನ್ನು ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಅದೆಷ್ಟು..? ಇದೆಷ್ಟು? ಎಂದು ಕೇಳುತ್ತಾ ಗಂಟೆ ಗಟ್ಟಲೆ ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲಾ ಬಿಚ್ಚಿಸಿ ನೋಡಿ ಬಳಿಕ ಏನನ್ನೂ ಖರೀದಿಸದೇ ಹೊರಬಂದಿದ್ದಾಳೆ.
ಇದರಿಂದ ಮಹಿಳಾ ವ್ಯಾಪಾರಿಯ ತಾಳ್ಮೆಯ ಕಟ್ಟೆ ಹೊಡೆದಿದ್ದು, ಗ್ರಾಹಕಿಯನ್ನು ಏನಾದರೂ ಖರೀದಿಸುವಂತೆ ಮನವಿ ಮಾಡಿದ್ದಾರೆ. ಆದರೆ ಗ್ರಾಹಕಿ ಏನೂ ಬೇಡ ಎಂದು ಹೊರಬರುತ್ತಲೇ ಆಕೆ ಭಾವುಕಳಾಗಿ ಕುಸಿದು ಗ್ರಾಹಕಿಯ ಕಾಲಿಗೆರಗಿ ಬೆಳಗ್ಗಿನಿಂದ ವ್ಯಾಪಾರವಿಲ್ಲ.. ದಯವಿಟ್ಟು ಏನಾದರೂ ಖರೀದಿಸಿ ಎಂದು ಕೇಳುತ್ತಿರುವ ಮನಕಲಕುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಗ್ರಾಹಕಿಯ ನಡವಳಿಕೆಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಈ ಘಟನೆಯು ಪ್ರತಿ ಕೌಂಟರ್ ಹಿಂದೆ ಒಬ್ಬ ಮಾನವನ ಸಮಯ ಮತ್ತು ಶ್ರಮವನ್ನು ಗೌರವಿಸಬೇಕು ಎಂಬುದನ್ನು ನೆನಪಿಸುತ್ತದೆ ಎಂದು ಅನೇಕ ವೀಕ್ಷಕರು ವ್ಯಕ್ತಪಡಿಸಿದ್ದಾರೆ.
Advertisement