'BJP feast' ನಲ್ಲಿ ಲಾಲು ಹಿರಿಯ ಪುತ್ರ! NDA ಸೇರ್ತಾರಾ?Video
ಪಾಟ್ನಾ: ರಾಷ್ಟ್ರೀಯ ಜನತಾ ದಳ (RJD) ಅಧ್ಯಕ್ಷ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ NDA ಸೇರುವ ವದಂತಿಗಳು ಹೆಚ್ಚಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಮಂಗಳವಾರ ಆಯೋಜಿಸಿದ್ದ BJP feast (ಔತಣಕೂಟ) ನಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಕುತೂಹಲ ಕೆರಳಿಸಿದ್ದಾರೆ.
ಆರ್‌ಜೆಡಿಯಿಂದ ಉಚ್ಛಾಟನೆ ನಂತರ ತಮ್ಮದೇ ಆದ ಜನಶಕ್ತಿ ಜನತಾ ದಳ ಪಕ್ಷವನ್ನು ಸ್ಥಾಪಿಸಿರುವ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರಿಗೆ ಸಿನ್ಹಾ ಆತ್ಮೀಯ ಸ್ವಾಗತ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಅವರಿಗೆ ಸಿನ್ಹಾ ಆಹ್ವಾನ ನೀಡಿದ್ದರು.
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಸಿನ್ಹಾ ಅವರ ನಿವಾಸದಲ್ಲಿ ಆಯೋಜಿಸಿದ್ದ feast ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಮತ್ತು ಸಚಿವ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥ ಸಂತೋಷ್ ಕುಮಾರ್ ಸುಮನ್ ಸೇರಿದಂತೆ ಹಿರಿಯ ಎನ್‌ಡಿಎ ನಾಯಕರು ಪಾಲ್ಗೊಂಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿರುವ ಯಾದವ್, NDA ಸೇರುವ ಯೋಜನೆ ಇದೆಯೇ ಎಂದು ಪತ್ರಕರ್ತರು ಕೇಳಿದಾಗ, ನಾವು ವಿಭಿನ್ನ ರಾಜಕೀಯ ಸಿದ್ಧಾಂತಗಳನ್ನು ಹೊಂದಿರಬಹುದು. ಆದರೆ ಒಂದೇ ರೀತಿಯ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತೇವೆ ಎಂದರು.
ಇದೇ ಧಾಟಿಯಲ್ಲಿ ಉತ್ತರಿಸಿದ ಸಿನ್ಹಾ, ಎಲ್ಲಾ ಬಿಹಾರಿಗಳು ಒಗ್ಗಟ್ಟಾಗಿ ನಿಲ್ಲುತ್ತಾರೆ. ಸನಾತನ ಸಂಸ್ಕೃತಿಯಿಂದ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತಾರೆ. ಇದು ಮಕರ ಸಂಕ್ರಾಂತಿಯ ಸಾರಾಂಶವಾಗಿದೆ. ತೇಜ್ ಪ್ರತಾಪ್ ಯಾದವ್ ಎನ್ ಡಿಎ ಸೇರ್ಪಡೆ ಕುರಿತು ಸಮಯ ಬಂದಾಗ ನಿಮಗೆ ತಿಳಿಯುತ್ತದೆ ಎಂದು ಹೇಳಿದರು.

