

ಇರಾನ್ ವಾಯುಪ್ರದೇಶವನ್ನು ಹಠಾತ್ ಮುಚ್ಚಿದ ನಂತರ ಅಮೆರಿಕಕ್ಕೆ ಹೋಗುವ ಕನಿಷ್ಠ ಮೂರು ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿದೆ. ಯುರೋಪ್ ಸೇವೆಗಳಲ್ಲಿ ವಿಳಂಬವಾಗುವ ಬಗ್ಗೆ ಕೂಡ ಎಚ್ಚರಿಕೆ ನೀಡಿದೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.
ದೆಹಲಿಯಿಂದ ನ್ಯೂಯಾರ್ಕ್ ಮತ್ತು ನ್ಯೂವಾರ್ಕ್‌ಗೆ ಎರಡು ಸೇವೆಗಳು ಮತ್ತು ಮುಂಬೈನಿಂದ ನ್ಯೂಯಾರ್ಕ್‌ಗೆ ಒಂದು ಸೇವೆ ರದ್ದಾಗಿದೆ. ಇರಾನಿನ ವಾಯುಪ್ರದೇಶವನ್ನು ತಪ್ಪಿಸಲು ವಿಮಾನಯಾನ ಸಂಸ್ಥೆಯು ಹಲವಾರು ಅಂತಾರಾಷ್ಟ್ರೀಯ ವಿಮಾನಗಳ ಮಾರ್ಗಗಳನ್ನು ಬದಲಾಯಿಸಿದೆ. ಇದರ ಪರಿಣಾಮವಾಗಿ ದೀರ್ಘ ಹಾರಾಟದ ಸಮಯವಾಗಿದ್ದು ಮತ್ತು ಸೇವೆಯಲ್ಲಿ ವಿಳಂಬವಾಯಿತು.
ಇರಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿಗಳ ನಡುವೆ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ. ಸಾಮಾನ್ಯವಾಗಿ ಇರಾನ್ ಮೇಲೆ ಹಾರುವ ವಿಮಾನಗಳು ಈಗ ಪರ್ಯಾಯ ಮಾರ್ಗಗಳನ್ನು ಬಳಸುತ್ತಿವೆ.
ಪ್ರಸ್ತುತ ಮಾರ್ಗ ಬದಲಾಯಿಸಲು ಸಾಧ್ಯವಾಗದ ಕೆಲವು ಏರ್ ಇಂಡಿಯಾ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆಯು ಅನಿರೀಕ್ಷಿತ ಅಡಚಣೆಯಿಂದ ಉಂಟಾದ ಅನನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.
ಏರ್ ಇಂಡಿಯಾ ಸಾಮಾನ್ಯವಾಗಿ ಅಮೆರಿಕ ಮತ್ತು ಯುರೋಪ್‌ಗೆ ಇರಾನಿನ ವಾಯುಪ್ರದೇಶವನ್ನು ಬಳಸುತ್ತದೆ. ಇರಾಕ್ ವಾಯುಪ್ರದೇಶದ ಮೂಲಕ ಪರ್ಯಾಯ ಮಾರ್ಗವು ಹಾರಾಟದ ಅವಧಿಯನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ವಿಮಾನಗಳು ತಡೆರಹಿತ ಯುಎಸ್ ಸೇವೆಗಳನ್ನು ನಿರ್ವಹಿಸಲು ಸಾಕಷ್ಟು ಇಂಧನ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ಏರ್ ಇಂಡಿಯಾ ಈಗಾಗಲೇ ಪಶ್ಚಿಮ ಭಾಗಕ್ಕೆ ದೀರ್ಘ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಅಡಚಣೆ ಉಂಟಾಗಿದೆ.
ಜಾರ್ಜಿಯಾದ ಟಿಬಿಲಿಸಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಇರಾನಿನ ವಾಯುಪ್ರದೇಶವನ್ನು ಕೆಲವೇ ಕ್ಷಣಗಳಲ್ಲಿ ದಾಟಿ ಬರುವಲ್ಲಿ ಯಶಸ್ವಿಯಾಯಿತು. ಫ್ಲೈಟ್‌ರಾಡಾರ್ 24 ರ ನೈಜ-ಸಮಯದ ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ನಿನ್ನೆ ರಾತ್ರಿ ಟಿಬಿಲಿಸಿಯಿಂದ ಹೊರಟ ಇಂಡಿಗೋ ವಿಮಾನ 6E1808, ಇಂದು ಬೆಳಗಿನ ಜಾವ ಸುಮಾರು 2.35 ಕ್ಕೆ ಇರಾನ್ ನ್ನು ದಾಟಿ ಬೆಳಗ್ಗೆ 7.03 ಕ್ಕೆ ದೆಹಲಿಯಲ್ಲಿ ಇಳಿಯಿತು.
Advertisement