

ನವದೆಹಲಿ: ಖಮೇನಿ ಆಡಳಿತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ನಂತರ ಇರಾನ್‌ನಿಂದ ಭಾರತೀಯರನ್ನು ಹೊತ್ತ ಮೊದಲ ಎರಡು ವಾಣಿಜ್ಯ ವಿಮಾನಗಳು ನಿನ್ನೆ ತಡರಾತ್ರಿ ದೆಹಲಿಗೆ ಬಂದಿಳಿದಿವೆ. ಇವು ಸಾಮಾನ್ಯ ವಿಮಾನಗಳಾಗಿದ್ದು, ಯಾವುದೇ ಸ್ಥಳಾಂತರಿಸುವ ಕಾರ್ಯದ ಭಾಗವಾಗಿರಲಿಲ್ಲ. ಆದಾಗ್ಯೂ ಭಾರತ ಸರ್ಕಾರ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಇರಾನ್‌ಗೆ ಪ್ರಯಾಣ ಮಾಡದಂತೆ ಈ ಹಿಂದೆ ನಾಗರಿಕರಿಗೆ ಸೂಚನೆ ಕೂಡಾ ನೀಡಿತ್ತು.
ಉದ್ವಿಗ್ನತೆಯ ನಡುವೆ ಇರಾನ್ ವಾಯುಪ್ರದೇಶವನ್ನು ಸ್ವಲ್ಪ ಸಮಯದವರೆಗೂ ಮುಚ್ಚಿದ್ದರಿಂದ ಜನವರಿ 15 ರಂದು ಭಾರತದ ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಿತು. ಇರಾನ್‌ನಲ್ಲಿ ವಾಯು ಸಂಚಾರ ಪುನರಾರಂಭವಾಗುತ್ತಿದ್ದಂತೆ ಹಲವಾರು ಭಾರತೀಯರು ಹಿಂತಿರುಗಲು ನಿರ್ಧರಿಸಿದರೂ ಪರಿಸ್ಥಿತಿ ಈಗ ಸಹಜ ಸ್ಥಿತಿಯತ್ತ ಸಾಗುತ್ತಿರುವಂತೆ ತೋರುತ್ತಿದೆ.
ಭಾರತಕ್ಕೆ ಹಿಂತಿರುಗಿದ ಭಾರತೀಯರು ಬಿಕ್ಕಟ್ಟಿನ ಸಂದರ್ಭದಲ್ಲಿ ನೆರವು ನೀಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. ಟೆಹ್ರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸಲಹೆಗಳನ್ನು ನೀಡಿತ್ತು. ಇರಾನ್‌ನಿಂದ ಸ್ಥಳಾಂತರಿಸಲು ಭಾರತೀಯ ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳೊಂದಿಗೆ ಸಂಪರ್ಕದಲ್ಲಿತ್ತು. ಇರಾನ್‌ನಿಂದ ಹಿಂದಿರುಗಿದ ಎಂಬಿಬಿಎಸ್ ವಿದ್ಯಾರ್ಥಿನಿ, ಪ್ರತಿಭಟನೆಗಳ ಬಗ್ಗೆ ಕೇಳಿದ್ದೇನೆ ಆದರೆ ಸ್ವತಃ ಯಾವುದೇ ಪ್ರತಿಭಟನೆ ನೋಡಿಲ್ಲ ಮತ್ತು ಅಲ್ಲಿ ಇಂಟರ್ನೆಟ್ ಇರಲಿಲ್ಲ ಎಂದು ಹೇಳಿದರು.
ಒಂದು ತಿಂಗಳ ಕಾಲ ಇರಾನ್‌ನಲ್ಲಿದ್ದ ಇನ್ನೊಬ್ಬ ಭಾರತೀಯ ಪ್ರಜೆ, ಕಳೆದ ಎರಡು ವಾರಗಳಿಂದ ಮಾತ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವು ಹೊರಗೆ ಹೋದಾಗ, ಪ್ರತಿಭಟನಾಕಾರರು ಕಾರಿನ ಮುಂದೆ ಬರುತ್ತಿದ್ದರು, ಅವರು ಸ್ವಲ್ಪ ತೊಂದರೆ ಕೊಟ್ಟಿದ್ದರು. ಇಂಟರ್ನೆಟ್ ಇರಲಿಲ್ಲ. ಆದ್ದರಿಂದ, ನಾವು ನಮ್ಮ ಕುಟುಂಬಗಳಿಗೆ ತಿಳಿಸಲು ಸಾಧ್ಯವಾಗದೆ ಸ್ವಲ್ಪ ಆತಂಕಕ್ಕೊಳಗಾಗಿದ್ದೇವು. ನಾವು ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸಹ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
ಕೆಲಸದ ಉದ್ದೇಶಕ್ಕಾಗಿ ಇರಾನ್‌ಗೆ ಹೋಗಿದ್ದ ಎಲೆಕ್ಟ್ರಿಕಲ್ ಇಂಜಿನಿಯರ್ ಮಾತನಾಡಿ, ಪರಿಸ್ಥಿತಿ ಈಗ ಸುಧಾರಿಸಿದೆ. ಅಲ್ಪಾವಧಿಯಲ್ಲಿ ಅವರು ಎದುರಿಸಿದ ಏಕೈಕ ಸಮಸ್ಯೆ ನೆಟ್‌ವರ್ಕ್ ಸಮಸ್ಯೆಯಾಗಿದೆ. ಜನರು ಚಿಂತಿತರಾಗಿದ್ದರು, ಆದರೆ ಈಗ ಟೆಹ್ರಾನ್‌ನಲ್ಲಿನ ಪರಿಸ್ಥಿತಿ ಈಗ ಸಾಮಾನ್ಯವಾಗಿದೆ. ಬೆಂಕಿ ಇತ್ತು; ಪ್ರತಿಭಟನೆಗಳು ಅಪಾಯಕಾರಿಯಾಗಿತ್ತು. ಆದಾಗ್ಯೂ, ಆಡಳಿತವನ್ನು ಬೆಂಬಲಿಸುವವರಿಗೆ ಹೋಲಿಸಿದರೆ ಸರ್ಕಾರ ವಿರೋಧಿ ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಿತ್ತು ಎಂದು ಹೇಳಿದರು.
ಅಲಿ ಖಮೇನಿ ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕಳೆದ ಎರಡು ವಾರಗಳಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದ್ದಾರೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಆಡಳಿತದ ನಡುವಿನ ಬೆದರಿಕೆ ಮಾತುಗಳು ಮಿಲಿಟರಿ ಸಂಘರ್ಷದ ಭಯವನ್ನು ಹೆಚ್ಚಿಸಿದೆ.
Advertisement