ಲಖನೌ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಪ್ರತೀಕ್ ಯಾದವ್ ಸೋಮವಾರ ತಮ್ಮ ಪತ್ನಿ, ಬಿಜೆಪಿ ನಾಯಕಿ ಅಪರ್ಣಾ ಬಿಶ್ತ್ ಯಾದವ್ ತಮ್ಮ ಕುಟುಂಬದ ಸಂಬಂಧಗಳನ್ನು ಹಾಳು ಮಾಡಿದ್ದಾರೆ ಮತ್ತು ಆದಷ್ಟು ಬೇಗ ವಿಚ್ಛೇದನ ಪಡೆಯಲು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಅಪರ್ಣಾ ಯಾದವ್ ಸದ್ಯ ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರಾಗಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿನ ಸುದೀರ್ಘ ಪೋಸ್ಟ್‌ನಲ್ಲಿ, ಪ್ರತೀಕ್ ಯಾದವ್ ಅವರು ಅಪರ್ಣಾ ಯಾದವ್ ಅವರನ್ನು 'ಕುಟುಂಬ ವಿಧ್ವಂಸಕ' ಎಂದು ಬಣ್ಣಿಸಿದ್ದಾರೆ. ಅವರು ಸ್ವಾರ್ಥಿಯಾಗಿದ್ದು, ಖ್ಯಾತಿ ಮತ್ತು ಪ್ರಭಾವವೇ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ.
'ನಾನು ಈ ಸ್ವಾರ್ಥಿ ಮಹಿಳೆಗೆ ಆದಷ್ಟು ಬೇಗ ವಿಚ್ಛೇದನ ನೀಡಲಿದ್ದೇನೆ. ಅವಳು ನನ್ನ ಕುಟುಂಬದ ಸಂಬಂಧಗಳನ್ನು ಹಾಳು ಮಾಡಿದಳು. ಅವಳಿಗೆ ಬೇಕಾಗಿರುವುದು ಪ್ರಸಿದ್ಧಿ ಮತ್ತು ಪ್ರಭಾವಶಾಲಿಯಾಗುವುದು. ಇದೀಗ, ನಾನು ತುಂಬಾ ಕೆಟ್ಟದಾದ ಮಾನಸಿಕ ಸ್ಥಿತಿಯಲ್ಲಿದ್ದೇನೆ ಮತ್ತು ಅವಳು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಅವಳು ತನ್ನ ಬಗ್ಗೆ ಮಾತ್ರ ಚಿಂತಿಸುತ್ತಾಳೆ. ನಾನು ಅಂತಹ ಕೆಟ್ಟ ಆತ್ಮವನ್ನು ಎಂದಿಗೂ ನೋಡಿಲ್ಲ ಮತ್ತು ಅವಳನ್ನು ಮದುವೆಯಾಗಿದ್ದು ನನ್ನ ದುರದೃಷ್ಟ' ಎಂದು ಪ್ರತೀಕ್ ಯಾದವ್ ಬರೆದಿದ್ದಾರೆ.
ಸುದ್ದಿಸಂಸ್ಥೆ ಪಿಟಿಐ ಅಪರ್ಣಾ ಯಾದವ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ, ಪ್ರತಿಕ್ರಿಯೆಗೆ ಅವರು ಲಭ್ಯವಿರಲಿಲ್ಲ. ಅವರ ಆಪ್ತರು ಸಹ ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಪ್ರತೀಕ್ ಯಾದವ್ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಯಾದವ್ ಅವರ ಮಗ. ಅವರ ಮಲಸಹೋದರ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸದ್ಯ ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದಾರೆ.
ಅಪರ್ಣಾ ಯಾದವ್ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋದ ಕ್ಯಾಂಟ್ ಸ್ಥಾನದಿಂದ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ ಸೋತರು.
ನಂತರ ಅವರು 2022ರ ಮಾರ್ಚ್‌ನಲ್ಲಿ ಬಿಜೆಪಿ ಸೇರಿದರು ಮತ್ತು ಪಕ್ಷಕ್ಕಾಗಿ ಬಹಿರಂಗವಾಗಿ ಪ್ರಚಾರ ಮಾಡಿದರು. ಅವರನ್ನು ಸೆಪ್ಟೆಂಬರ್ 2024 ರಲ್ಲಿ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ವಿಷಯದ ಬಗ್ಗೆ ಎಸ್‌ಪಿ ಅಥವಾ ಬಿಜೆಪಿ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement