

ನವದೆಹಲಿ: ಭಾರತವು 2030 ರ ವೇಳೆಗೆ 'ಮೇಲ್ಮಧ್ಯಮ-ಆದಾಯದ' ದೇಶವಾಗುವ ಸಾಧ್ಯತೆಯಿದೆ. ಪ್ರಸ್ತುತ ಇರುವ ತಲಾ ಆದಾಯ ಸುಮಾರು $ 3,000 ರಿಂದ $ 4,000 ಕ್ಕೆ ಏರುವುದರೊಂದಿಗೆ ದೇಶ ಆರ್ಥಿಕವಾಗಿ ಪ್ರಗತಿಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಸೋಮವಾರದ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ವಿಶ್ವ ಬ್ಯಾಂಕ್‌ನ ವರ್ಗೀಕರಣದ ಪ್ರಕಾರ, ಭಾರತ ಪ್ರಸ್ತುತ 'ಕಡಿಮೆ ಮಧ್ಯಮ-ಆದಾಯದ' ಗುಂಪಿನ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. 2007 ರಲ್ಲಿ ಈ ಸಾಧನೆಗೆ ಪಾತ್ರವಾಗಿತ್ತು.
SBI ಸಂಶೋಧನಾ ವರದಿ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದ ತಲಾ ಆದಾಯದಲ್ಲಿ $ 1,000 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ತಲಾ ಆದಾಯ $1,000 ರಿಂದ $2,000 ಕ್ಕೆ ಹೆಚ್ಚಾಗಲು 10 ವರ್ಷಗಳನ್ನು ತೆಗೆದುಕೊಂಡಿತು. ಇನ್ನು ಉಳಿದ ಏಳು ವರ್ಷಗಳಲ್ಲಿ ಮತ್ತೆ $ 1,000 ಹೆಚ್ಚಾಗಿತ್ತು.
ಭಾರತ 2007 ರಲ್ಲಿ 'ಕಡಿಮೆ-ಆದಾಯದ ದೇಶ'ದಿಂದ 'ಕಡಿಮೆ-ಮಧ್ಯಮ ಆದಾಯ' ರಾಷ್ಟ್ರ ಎನಿಸಿಕೊಂಡಿತು. ಇದಕ್ಕಾಗಿ 60 ವರ್ಷಗಳನ್ನು ತೆಗೆದುಕೊಂಡಿತು. 1962 ರಲ್ಲಿದ್ದ ದೇಶದ ತಲಾ ಒಟ್ಟು ರಾಷ್ಟ್ರೀಯ ಆದಾಯ (GNI) $90 ರಿಂದ 2007 ರಲ್ಲಿ $910 ಕ್ಕೆ ಏರಿತು.
ಮುಂದಿನ ಕೆಲವು ವರ್ಷಗಳಲ್ಲಿ ದೇಶದ ತಲಾ ಒಟ್ಟು ರಾಷ್ಟ್ರೀಯ ಆದಾಯ ಸುಮಾರು $4,500 ರಷ್ಟು ಹೆಚ್ಚಾಗುವುದರೊಂದಿಗೆ (ಶೇ. 8.3 ರಷ್ಟು ತಲಾವಾರು ಸರಾಸರಿ ಬೆಳವಣಿಗೆ) ಭಾರತವು ಮೇಲ್ಮಧ್ಯಮ-ಆದಾಯದ ರಾಷ್ಟ್ರವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ತಂಡ ಬರೆದಿರುವ ವರದಿಯಲ್ಲಿ ಹೇಳಲಾಗಿದೆ.
ವಿಶ್ವಬ್ಯಾಂಕ್‌ನಿಂದ ಮಿತಿ ಮಟ್ಟವನ್ನು ಪರಿಷ್ಕರಿಸದಿದ್ದಲ್ಲಿ ತಲಾ ಆದಾಯದಲ್ಲಿ ವಾರ್ಷಿಕ ಸರಾಸರಿ 7.5% ರಷ್ಟು ಬೆಳವಣಿಗೆಯೊಂದಿಗೆ 2047 ರ ವೇಳೆಗೆ ಭಾರತವು ಹೆಚ್ಚಿನ ಆದಾಯದ ರಾಷ್ಟ್ರದ ಸ್ಥಾನಮಾನ ಸಾಧಿಸಬಹುದು ಎಂದು ಎಸ್‌ಬಿಐ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
Advertisement