

ನವದೆಹಲಿ: 2019 ಮತ್ತು 2025 ರ ನಡುವೆ ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಹಲವು ಕಡೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇಡಿ), 1.3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ ಮತ್ತು ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದಿದೆ.
ದ್ವಾರಪಾಲಕರ ಚಿನ್ನದ ವಿಗ್ರಹ, ಪೀಠಗಳು ಮತ್ತು ಗರ್ಭಗುಡಿಯ ಬಾಗಿಲಿನ ಫಲಕಗಳು ಸೇರಿದಂತೆ ಚಿನ್ನದ ಹೊದಿಕೆಯ ಪವಿತ್ರ ಕಲಾಕೃತಿಗಳನ್ನು ವ್ಯವಸ್ಥಿತವಾಗಿ ಹೇಗೆ ಕಳವು ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸುವ ಬೃಹತ್ ಪ್ರಮಾಣದ ದೋಷಾರೋಪಣಾ ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ಪತ್ತೆ ಮಾಡಿರುವುದಾಗಿ ಕೇಂದ್ರ ತನಿಖಾ ಸಂಸ್ಥೆ ಬುಧವಾರ ತಿಳಿಸಿದೆ.
ಅಪರಾಧದ ಆದಾಯದ ದುರ್ಬಳಕೆ ತಡೆಗಟ್ಟಲು ಕೇಂದ್ರ ತನಿಖಾ ಸಂಸ್ಥೆಯು ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 17(1A) ಅಡಿಯಲ್ಲಿ ಪ್ರಮುಖ ಆರೋಪಿಗಳಿಗೆ ಸೇರಿದ ಸುಮಾರು 1.3 ಕೋಟಿ ರೂ. ಮೌಲ್ಯದ ಎಂಟು ಸ್ಥಿರ ಆಸ್ತಿಗಳನ್ನು ಸೀಜ್ ಮಾಡಿದೆ.
"ಕಳ್ಳತನ ಮಾಡಿದ ಚಿನ್ನ ಸ್ವೀಕರಿಸಿದ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್‌ನಿಂದ 100 ಗ್ರಾಂ ಚಿನ್ನದ ಗಟ್ಟಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ" ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದ ಚಿನ್ನ ಮತ್ತು ಇತರ ದೇವಾಲಯದ ಆಸ್ತಿಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಮಂಗಳವಾರ ಕೇರಳ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ 21 ಸ್ಥಳಗಳಲ್ಲಿ ದಾಳಿ ನಡೆಸಿತ್ತು.
ಕೇರಳ ಪೊಲೀಸ್ ಅಪರಾಧ ಶಾಖೆ ದಾಖಲಿಸಿದ ಎರಡು ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದ್ದು, ಇದು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ)ಯ ಹಿರಿಯ ಅಧಿಕಾರಿಗಳು, ಹಿಂದಿನ ದೇವಾಲಯ ಆಡಳಿತಾಧಿಕಾರಿಗಳು, ಖಾಸಗಿ ಪ್ರಾಯೋಜಕರು ಮತ್ತು ಆಭರಣ ವ್ಯಾಪಾರಿಗಳನ್ನು ಒಳಗೊಂಡ ಯೋಜಿತ ಕ್ರಿಮಿನಲ್ ಪಿತೂರಿಯನ್ನು ಬಹಿರಂಗಪಡಿಸಿದೆ.
Advertisement