

ಜೈಪುರ: ಇಡೀ ದೇಶ 77ನೇ ಗಣರಾಜ್ಯೋತ್ಸವ ದಿನಾಚರಣೆ ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೊಂದು ಬದಿಯಲ್ಲಿ ಭದ್ರತಾ ಪಡೆಗಳು ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿಸಿದ್ದಾರೆ.
ರಾಜಸ್ಥಾನದಲ್ಲಿ ಉಗ್ರರು ಸಂಚು ರೂಪಿಸಿ ಭಾರಿ ಅನಾಹುತಕ್ಕೆ ಯತ್ನಿಸಿದ್ದ ಅಘಾತಕಾರಿ ಸುದ್ದಿ ಬಹಿರಂಗವಾಗಿದೆ. ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಈ ಸಂಚು ವಿಫಲವಾಗಿದೆ. ರಾಜಸ್ಥಾನದ ನಾಗೌರ್ (Nagaur) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ.
ಸುಮಾರು 10,000 ಕೆಜಿ (9,550 ಕೆಜಿ ನಿಖರವಾಗಿ) ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೋನಿಯಂ ನೈಟ್ರೇಟ್‌ನೊಂದಿಗೆ ದೊಡ್ಡ ಪ್ರಮಾಣದ ಡೆಟೋನೇಟರ್‌ಗಳು, ಫ್ಯೂಸ್ ವೈರ್‌ಗಳು ಮತ್ತು ಇತರ ಸ್ಫೋಟಕ ಸಾಮಗ್ರಿಗಳನ್ನು ಹೊಂದಿದ್ದ 187 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಕಾರ್ಯಚರಣೆ ಎಂದು ಹೇಳಲಾಗಿದೆ.
ನಾಗೌರ್ ಫಾರ್ಮ್ ಹೌಸ್ ನಲ್ಲಿ ಸ್ಫೋಟಕ ಪತ್ತೆ
ನಾಗೌರ್ ಜಿಲ್ಲೆಯ ಹರ್ಸೋರ್ ಗ್ರಾಮದ ನಿರ್ಜನ ಪ್ರದೇಶದಲ್ಲಿದ್ದ ಫಾರ್ಮ್‌ಹೌಸ್ ಮೇಲೆ ಜಿಲ್ಲಾ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ವೇಳೆ ಈ ಸ್ಫೋಟಕಗಳು ಸಿಕ್ಕಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲೇಮಾನ್ ಖಾನ್ (50) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈತ ಹರ್ಸೋರ್ ಗ್ರಾಮದ ನಿವಾಸಿಯಾಗಿದ್ದು, ಇವನ ವಿರುದ್ಧ ಈಗಾಗಲೇ ಸ್ಫೋಟಕ ಕಾಯ್ದೆಯಡಿ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿಯು ಈ ಸ್ಫೋಟಕಗಳನ್ನು ಅಕ್ರಮ ಗಣಿಗಾರಿಕೆ ಉದ್ದೇಶಕ್ಕಾಗಿ ಪೂರೈಸಲು ಸಂಗ್ರಹಿಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಗಣರಾಜ್ಯೋತ್ಸವದ ಮುನ್ನಾದಿನ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕ ಸಿಕ್ಕಿರುವುದು ಭದ್ರತಾ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗಿದೆ.
ಕಳೆದ ವರ್ಷ (ನವೆಂಬರ್ 2025) ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದ ಮಾದರಿಯಲ್ಲೇ ಈ ಸ್ಫೋಟಕಗಳೂ ಇರುವುದರಿಂದ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಕೆಂಪುಕೋಟೆ ಸ್ಫೋಟ ಮಾದರಿ
ಇತ್ತೀಚೆಗೆ ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದಲ್ಲಿ ಬಳಸಲಾಗಿದ್ದ ಅದೇ ಮಾದರಿಯ ಅಮೋನಿಯಂ ನೈಟ್ರೇಟ್ ಮತ್ತು ಡೆಟೋನೇಟರ್‌ಗಳು ಇಲ್ಲಿಯೂ ಸಿಕ್ಕಿರುವುದರಿಂದ, ಇವೆರಡಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ NIA ತನಿಖೆ ನಡೆಸುತ್ತಿದೆ. ಸ್ಫೋಟಕಗಳ ವಶದ ನಂತರ ದೇಶಾದ್ಯಂತ, ವಿಶೇಷವಾಗಿ ದೆಹಲಿ ಮತ್ತು ರಾಜಸ್ಥಾನದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಸುಲೇಮಾನ್ ಖಾನ್‌ನ ಹಿನ್ನೆಲೆ
ಈ ಪ್ರಕರಣದಲ್ಲಿ ಬಂಧಿತ ಸುಲೇಮಾನ್ ಖಾನ್ ಹಿನ್ನಲೆಯನ್ನು ಮಾಹಿತಿ ನೀಡಿದ ಪೊಲೀಸರು, ಈತ ನಾಗೌರ್ ಜಿಲ್ಲೆಯ ಹರ್ಸೋರ್ ಗ್ರಾಮದ ನಿವಾಸಿಯಾಗಿದ್ದು, 58 ವರ್ಷ ವಯಸ್ಸಿನವನು. ಮೇಲ್ನೋಟಕ್ಕೆ ಈತ ಕೃಷಿ ಮತ್ತು ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ. ಈತನ ಮೇಲೆ ಈ ಹಿಂದೆ ಸ್ಫೋಟಕ ಕಾಯ್ದೆಯಡಿ (Explosives Act) ಮೂರು ಪ್ರಕರಣಗಳು ದಾಖಲಾಗಿವೆ'.
Advertisement