

ಮುಂಬೈ: ಗಣರಾಜ್ಯೋತ್ಸವ ಆಚರಣೆಗೆ ಅಳವಡಿಸಲಾಗಿದ್ದ ಧ್ವನಿವರ್ಧಕವೊಂದು ಕುಸಿದು ಬಿದ್ದು ಮೂರು ವರ್ಷದ ಬಾಲಕಿ ಸಾವನ್ನಪ್ಪಿದ ದುರಂತ ಘಟನೆ ವರದಿಯಾಗಿದೆ.
ಮುಂಬೈನ ವಿಖ್ರೋಲಿ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದ್ದು, ಘಟನೆಯು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ತಲೆಯ ಮೇಲೆ ರಗ್ಗುಗಳನ್ನು ಹೊತ್ತುಕೊಂಡು ಹೋಗುವ ವ್ಯಕ್ತಿಯನ್ನು ನೋಡಬಹುದು. ಅವನ ಹಿಂದೆಯೇ ಮೂರು ವರ್ಷದ ಬಾಲಕಿ ಆಟವಾಡುತ್ತ ಓಡಿ ಬರುತ್ತಿರುವುದು ದಾಖಲಾಗಿದೆ.
ಈ ವೇಳೆ ವ್ಯಕ್ತಿಯ ರಗ್ಗು ಸ್ಪೀಕರ್ ನ ವೈರ್ ಗೆ ತಗುಲಿ ಅದು ಅಲುಗಾಡಿದೆ. ಇದೇ ಸಂದರ್ಭದಲ್ಲಿ ಎರಡೂ ಸ್ಪೀಕರ್ ಗಳು ಕೆಳಗೆ ಬಿದ್ದಿದ್ದು, ಅದೇ ಸಂದರ್ಭದಲ್ಲಿ ಮಗು ಅಲ್ಲಿಗೆ ಬಂದ ಕಾರಣ ಎರಡೂ ಸ್ಪೀಕರ್ ಗಳು ತಲೆ ಮೇಲೆ ಬಿದ್ದಿದೆ.
ಈ ವೇಳೆ ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಇದನ್ನು ಕಂಡ ಇಬ್ಬರು ವ್ಯಕ್ತಿಗಳು ಕೂಡಲೇ ಮಗುವನ್ನು ಹೊತ್ತುಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮಗು ಸಾವನ್ನಪ್ಪಿದೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
ವಿಖೋಲಿ ಪೊಲೀಸರಲ್ಲಿ ಪ್ರಕರಣ ದಾಖಲಾಗಿದ್ದು, ಅದರ ಬಗ್ಗೆ ತನಿಖೆ ನಡೆಯುತ್ತಿದೆ.
Advertisement