ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಆದೇಶ ಕಾಯ್ದಿರಿಸಿದ ನ್ಯಾಯಾಲಯ!

ವಿಚಾರಣೆ ಆರಂಭವಾಗದೆಯೇ ದೀರ್ಘಕಾಲ ಜೈಲಿನಲ್ಲಿರಿಸುವುದು ಅನ್ಯಾಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿ ಖಾಲಿದ್ ಮತ್ತು ಇಮಾಮ್ ಜಾಮೀನು ಕೋರಿದ್ದಾರೆ.
Umar Khalid and Sharjeel Imam
ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್
Updated on

ನವದೆಹಲಿ: 2020ರ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳ ಮೇಲಿನ ಆದೇಶವನ್ನು ದೆಹಲಿ ನ್ಯಾಯಾಲಯ ಶನಿವಾರ ಕಾಯ್ದಿರಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್ಪೈ ಅವರು ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳ ವಾದಗಳನ್ನು ಆಲಿಸಿದ ನಂತರ ಪ್ರಕರಣದ ಆದೇಶವನ್ನು ಕಾಯ್ದಿರಿಸಿದ್ದಾರೆ.

ವಿಚಾರಣೆ ಆರಂಭವಾಗದೆಯೇ ದೀರ್ಘಕಾಲ ಜೈಲಿನಲ್ಲಿರಿಸುವುದು ಅನ್ಯಾಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿ ಖಾಲಿದ್ ಮತ್ತು ಇಮಾಮ್ ಜಾಮೀನು ಕೋರಿದ್ದಾರೆ.

ಸುದ್ದಿಸಂಸ್ಥೆ PTI ವರದಿ ಪ್ರಕಾರ, ಜನವರಿ 5 ರಂದು ಸುಪ್ರೀಂ ಕೋರ್ಟ್ ಈಗಾಗಲೇ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರೂ, ಅಂದಿನಿಂದೀಚೆಗೆ 'ಹೊಸ ಕಾನೂನು ಬೆಳವಣಿಗೆಗಳು' ನಡೆದಿವೆ. ಈ ಬದಲಾವಣೆಗಳ ಕಾರಣದಿಂದಾಗಿ, ತಾವು ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಲು ಮತ್ತು ಅದನ್ನು ಮರುಪರಿಶೀಲನೆಗೆ ಒಳಪಡಿಸಲು ಅರ್ಹರೆಂದು ಭಾವಿಸುವುದಾಗಿ ಖಾಲಿದ್ ಹೇಳಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿನ ಗಂಭೀರ ಪ್ರಕರಣಗಳಲ್ಲಿಯೂ ಸಹ, ಸುಪ್ರೀಂ ಕೋರ್ಟ್ ಕೆಲವು ಪ್ರಕರಣಗಳಲ್ಲಿ 'ಜಾಮೀನು ನೀಡಬೇಕು' ಎಂದು ಹೇಳಿದೆ. ವಿಶೇಷವಾಗಿ ವಿಚಾರಣೆ ತುಂಬಾ ಸಮಯ ತೆಗೆದುಕೊಳ್ಳುತ್ತಿರುವಾಗ ಅಥವಾ ಬೇಗ ಮುಗಿಯುವ ಸಾಧ್ಯತೆಯಿಲ್ಲದಿದ್ದಾಗ ಯುಎಪಿಎ ಕಟ್ಟುನಿಟ್ಟಾದ ಜಾಮೀನು ನಿಯಮಗಳನ್ನು ಹೊಂದಿದ್ದರೂ, ಆ ನಿಯಮಗಳು ಸಾಂವಿಧಾನಿಕ ಹಕ್ಕುಗಳನ್ನು ಅತಿಕ್ರಮಿಸಬಾರದು ಎಂದು ಹೇಳಲು ಅವರು ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.

Umar Khalid and Sharjeel Imam
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ತನ್ನ ವಿರುದ್ಧ ಆರೋಪಗಳನ್ನು ಹೊರಿಸುವ ಮೊದಲೇ ತಾನು ಸುಮಾರು ಆರು ವರ್ಷಗಳಿಂದ ಜೈಲಿನಲ್ಲಿದ್ದೇನೆ. ಈ ಪ್ರಕರಣದಲ್ಲಿ ಅನೇಕ ಆರೋಪಿಗಳು, ಸಾಕ್ಷಿಗಳು ಮತ್ತು ದಾಖಲೆಗಳು ಒಳಗೊಂಡಿರುವುದರಿಂದ ವಿಚಾರಣೆಯು ಸದ್ಯದಲ್ಲೇ ಆರಂಭವಾಗುವ ಸಾಧ್ಯತೆಯಿಲ್ಲ ಎಂದು ಖಾಲಿದ್ ವಾದಿಸಿದರು ಎಂದು ಪಿಟಿಐ ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ತಮಗೆ ಜಾಮೀನು ನಿರಾಕರಿಸಿ ಆರು ತಿಂಗಳು ಕಳೆದಿದ್ದರೂ, ಪ್ರಕರಣದ ವಿಚಾರಣೆಯಲ್ಲಿ ಯಾವುದೇ 'ಗಮನಾರ್ಹ ಪ್ರಗತಿ' ಕಂಡುಬಂದಿಲ್ಲ. ಅಲ್ಲದೆ, ಯಾವುದೇ ವಿಚಾರಣೆಯಿಲ್ಲದೆ ತಾವು ಸುಮಾರು ಆರು ವರ್ಷಗಳಿಂದ ವಶದಲ್ಲೇ ಇದ್ದೇವೆ ಮತ್ತು ಈ ಪ್ರಕರಣದಲ್ಲಿ ಇನ್ನೂ ಆರೋಪಗಳನ್ನು ಹೊರಿಸಲಾಗಿಲ್ಲ ಎಂದು ಇಮಾಮ್ ತಮ್ಮ ಅರ್ಜಿಯಲ್ಲಿ ವಾದಿಸಿರುವುದಾಗಿ ವರದಿ ತಿಳಿಸಿದೆ.

ಜನವರಿ 5 ರಂದು ಸುಪ್ರೀಂ ಕೋರ್ಟ್ ಯುಎಪಿಎ (UAPA) ಪ್ರಕರಣದಲ್ಲಿ ಖಾಲಿದ್ ಮತ್ತು ಇಮಾಮ್‌ಗೆ ಜಾಮೀನು ನಿರಾಕರಿಸಿದ ಹಾಗೂ ಸಹ-ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ನೀಡಿದ ನಂತರ, ಹೊಸ ಜಾಮೀನು ಅರ್ಜಿಗಳನ್ನು ಸಲ್ಲಿಸಲಾಯಿತು.

ಫೆಬ್ರುವರಿ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (CAA) ಮತ್ತು ಪ್ರಸ್ತಾವಿತ ರಾಷ್ಟ್ರೀಯ ಪೌರರ ನೋಂದಣಿ (NRC) ವಿರುದ್ಧದ ಪ್ರತಿಭಟನೆಗಳ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ 53 ಮಂದಿ ಮೃತಪಟ್ಟರು ಮತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಆ ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಖಾಲಿದ್, ಇಮಾಮ್ ಮತ್ತು ಇತರ ಹಲವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com