ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ಎಂದ Kiren Rijiju, ವಿಪಕ್ಷಗಳ 'ಬಂಡಾಯ' ಪ್ರತಿಧ್ವನಿಸುವ ಸಾಧ್ಯತೆ!

ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ರ ಮುಂಗಾರು ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯಲು ಅನುಮೋದನೆ ನೀಡಿದ್ದಾರೆ.
Monsoon session of Parliament
ಸಂಸತ್ ಅಧಿವೇಶನ
Updated on

ನವದೆಹಲಿ: 2026ರ ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 20ರಿಂದ ಆಗಸ್ಟ್ 13ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಿರಣ್ ರಿಜಿಜು ಅವರು, "ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ರ ಮುಂಗಾರು ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯಲು ಅನುಮೋದನೆ ನೀಡಿದ್ದಾರೆ.

ಅಧಿವೇಶನವು ಜುಲೈ 20ರಂದು ಆರಂಭವಾಗಿ ಆಗಸ್ಟ್ 13ರವರೆಗೆ ನಡೆಯಲಿದೆ. ರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ, ವಿಚಾರ ವಿನಿಮಯ ಮತ್ತು ನಿರ್ಧಾರಗಳಿಗೆ ಈ ಅಧಿವೇಶನ ವೇದಿಕೆಯಾಗಲಿದೆ" ಎಂದು ಮಾಹಿತಿ ನೀಡಿದ್ದಾರೆ.

25 ದಿನಗಳ ಈ ಅಧಿವೇಶನದಲ್ಲಿ ಒಟ್ಟು 19 ಸಭೆಗಳು ನಡೆಯಲಿವೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿದ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ.

Monsoon session of Parliament
ದೀದಿಗೆ ಮತ್ತೊಂದು ಶಾಕ್; ಮಮತಾ ಬಣದ TMC ರಾಜ್ಯಾಧ್ಯಕ್ಷೆ ಸ್ಥಾನಕ್ಕೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ!

ವಿಪಕ್ಷಗಳಲ್ಲಿನ ಬಂಡಾಯ ಪ್ರತಿಧ್ವನಿಸುವ ಸಾಧ್ಯತೆ

ಇದೇ ವೇಳೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಶಿವಸೇನೆ (ಯುಬಿಟಿ) ಪಕ್ಷಗಳಲ್ಲಿನ ಬಂಡಾಯದ ಪರಿಣಾಮವೂ ಈ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ. ಟಿಎಂಸಿಯ 20 ಹಾಗೂ ಶಿವಸೇನೆ (ಯುಬಿಟಿ)ಯ ಆರು ಸಂಸದರು ತಮ್ಮನ್ನು ಪ್ರತ್ಯೇಕ ಗುಂಪುಗಳೆಂದು ಮಾನ್ಯತೆ ನೀಡುವಂತೆ ಸಲ್ಲಿಸಿರುವ ಮನವಿಯ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ.

ಎನ್ ಡಿಎ ರಾಜ್ಯಸಭೆ ಸಂಖ್ಯಾಬಲ ಹೆಚ್ಚಳ

ಅಂತೆಯೇ ರಾಜ್ಯಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಹಾಗೂ ಮರು ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲ ಮತ್ತಷ್ಟು ಹೆಚ್ಚಾಗಿದೆ.

ರಾಜ್ಯಸಭೆಯ ಟಿಎಂಸಿಯ ಮೂವರು ಬಂಡಾಯ ಸಂಸದರು ರಾಜೀನಾಮೆ ನೀಡಿದ್ದು, ನಡೆಯಲಿರುವ ಉಪಚುನಾವಣೆಗಳ ಮೂಲಕ ಬಿಜೆಪಿಯ ಬಲ ರಾಜ್ಯಸಭೆಯಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಇದೇ ವೇಳೆ, ವಿವಾದಾತ್ಮಕ 130ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಜುಲೈ 17ರಂದು ತನ್ನ ವರದಿಯನ್ನು ಅಂಗೀಕರಿಸುವ ನಿರೀಕ್ಷೆಯಿದೆ.

ತಿದ್ದುಪಡಿ ಮಸೂದೆಗೆ ಅಂಗೀಕಾರ ಸಾಧ್ಯತೆ

ಗಂಭೀರ ಅಪರಾಧ ಪ್ರಕರಣದಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಅಥವಾ ರಾಜ್ಯ ಸಚಿವರು ಬಂಧನಕ್ಕೊಳಗಾಗಿ ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ, ಅವರು ಸ್ವಯಂಚಾಲಿತವಾಗಿ ಹುದ್ದೆಯಿಂದ ಅನರ್ಹರಾಗುವಂತೆ ಮಾಡುವ ವಿವಾದಾತ್ಮಕ ವಿಧಿಯನ್ನು ಮಸೂದೆಯಲ್ಲಿ ಮುಂದುವರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಈ ವಿಧಿಯನ್ನು ರಾಜಕೀಯ ಪ್ರತೀಕಾರ ಅಥವಾ ದುರುದ್ದೇಶಪೂರಿತ ಪ್ರಕರಣಗಳಿಗೆ ದುರುಪಯೋಗಪಡಿಸಿಕೊಳ್ಳದಂತೆ ಅಗತ್ಯ ರಕ್ಷಣಾತ್ಮಕ ಕ್ರಮಗಳನ್ನು ವರದಿಯಲ್ಲಿ ಸೇರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ತಿದ್ದುಪಡಿ ಮಸೂದೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಬೆಂಬಲಿಗರು ಸಾರ್ವಜನಿಕ ಹುದ್ದೆಗಳಲ್ಲಿ ಉತ್ತರದಾಯಿತ್ವ ಹೆಚ್ಚಿಸಲು ಇದು ನೆರವಾಗಲಿದೆ ಎಂದು ವಾದಿಸಿದರೆ, ವಿರೋಧ ಪಕ್ಷಗಳು ರಾಜಕೀಯ ಪ್ರೇರಿತ ತನಿಖೆ ಮತ್ತು ಬಂಧನಗಳ ಮೂಲಕ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಇದನ್ನು ಬಳಸಿಕೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿವೆ.

ಜುಲೈ 17ರಂದು ನಡೆಯುವ ಸಭೆಯಲ್ಲಿ ಜೆಪಿಸಿ ತನ್ನ ವರದಿಯನ್ನು ಅಂತಿಮಗೊಳಿಸಿ ಅಂಗೀಕರಿಸಿದ ಬಳಿಕ, ಮುಂದಿನ ಚರ್ಚೆಗಾಗಿ ಅದನ್ನು ಸಂಸತ್ತಿಗೆ ಸಲ್ಲಿಸುವ ನಿರೀಕ್ಷೆಯಿದೆ.

ಇದರ ಜೊತೆಗೆ, ಆಪರೇಷನ್ ಸಿಂಧೂರ್ ವೇಳೆ ಭಾರತೀಯ ಯೋಧರ ಸಾವಿನ ಕುರಿತು ಸಂಸತ್ತನ್ನು ದಾರಿ ತಪ್ಪಿಸುವ ಉದ್ದೇಶದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು "ಸ್ಪಷ್ಟ ಸುಳ್ಳು" ಹೇಳಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿರುವ ಹಿನ್ನೆಲೆಯಲ್ಲಿ, ಅವರ ವಿರುದ್ಧದ ವಿಶೇಷ ಹಕ್ಕು ಉಲ್ಲಂಘನೆ (Privilege) ಪ್ರಕ್ರಿಯೆಯ ವಿಷಯವನ್ನೂ ಪ್ರತಿಪಕ್ಷಗಳು ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com