

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಉಗ್ರರ ವಿರುದ್ಧ ನಡೆಯುತ್ತಿರುವ ಈ ಕಾರ್ಯಾಚರಣೆ ಭಾನುವಾರ 2ನೇ ದಿನವೂ ಮುಂದುವರೆದಿದೆ.
ಮೀಮಾಂದರ್ ಪ್ರದೇಶದ ದಟ್ಟವಾದ ತೋಟವೊಂದರಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಗೆ ಸೇರಿದ ಇಬ್ಬರು ಸ್ಥಳೀಯ ಉಗ್ರರು ಸಿಕ್ಕಿಹಾಕಿಕೊಂಡಿದ್ದು, ಶರಣಾಗಲು ಮನಸ್ಸಿಲ್ಲದೆ, ತಪ್ಪಿಸಿಕೊಳ್ಳಲೂ ಆಗದೆ, ಭದ್ರತಾ ಪಡೆಗಳ ಮೇಲೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ.
ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಶುಕ್ರವಾರ ನಿಗಾ ಕ್ಯಾಮೆರಾಗಳಲ್ಲಿ ಇಬ್ಬರು ಉಗ್ರರು ದಟ್ಟವಾದ ಹಣ್ಣಿನ ತೋಟದಲ್ಲಿ ಅಡಗಿರುವುದು ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ಭದ್ರತಾ ಪಡೆಗಳು ವ್ಯಾಪಕ ಕಾರ್ಯಾಚರಣೆ ಆರಂಭಿಸಿವೆ.
ಕಾರ್ಯಾಚರಣೆಯ ಆರಂಭದಲ್ಲೇ ಭದ್ರತಾ ಪಡೆಗಳು ಸಂಪೂರ್ಣ ಪ್ರದೇಶವನ್ನು ಸುತ್ತುವರಿದು, ಮೀಮಂದರ್ ವ್ಯಾಪ್ತಿಯ ಏಳು ಗ್ರಾಮಗಳಲ್ಲಿ ನಾಲ್ಕು ಗ್ರಾಮಗಳನ್ನು ಸಂಪೂರ್ಣವಾಗಿ ಪರಿಶೀಲಿಸಿವೆ.
ಈ ವೇಳೆ ಸೇನಾ ಯೋಧರು ಮುಂದೆ ಸಾಗುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ. ನಂತರ ಉಗ್ರರು ದಟ್ಟವಾದ ತೋಟದೊಳಗೆ ಅಡಗಿಕೊಂಡಿದ್ದಾರೆಂಬುದು ಖಚಿತವಾಗಿದೆ.
ಸಿಲುಕಿರುವ ಉಗ್ರರನ್ನು ಲತೀಫ್ ಮತ್ತು ಜಾಕಿರ್ ಎಂದು ಗುರುತಿಸಲಾಗಿದೆ. ಇಬ್ಬರೂ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಜಾಕಿರ್ 2024ರಿಂದ ಲಷ್ಕರ್-ಎ-ತೊಯ್ಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರೆ, ಲತೀಫ್ ಕಳೆದ ವರ್ಷ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಟ್ಟವಾದ ಮರಗಳ ನಡುವೆ ಉಗ್ರರು ತಪ್ಪಿಸಿಕೊಳ್ಳದಂತೆ ಸೇನೆಯ ವಿಶೇಷ ಭಯೋತ್ಪಾದನೆ ನಿಗ್ರಹ ದಳವಾದ ವಿಕ್ಟರ್ ಫೋರ್ಸ್ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದೆ.
ತೋಟದ ಸುತ್ತಲಿನ ಎಲ್ಲಾ ನಿರ್ಗಮನ ಮಾರ್ಗಗಳನ್ನು ಮುಚ್ಚಲಾಗಿದ್ದು, ರಾತ್ರಿ ವೇಳೆ ಸಂಪೂರ್ಣ ಪ್ರದೇಶವನ್ನು ಬೆಳಕಿನಿಂದ ಆವರಿಸಿ ನಿಗಾ ಬಿಗಿಗೊಳಿಸಲಾಗಿದೆ.
ಬೇಸಿಗೆಯ ಸಮಯದಲ್ಲಿ ಮರಗಳ ದಟ್ಟ ಎಲೆಗಳು ಉಗ್ರರಿಗೆ ಸಹಜವಾದ ಅಡಗುತಾಣವನ್ನು ಒದಗಿಸುತ್ತವೆ. ಇದರಿಂದ ನಿಗಾ ಕಾರ್ಯ ಕಷ್ಟವಾಗುತ್ತಿದ್ದು, ಭದ್ರತಾ ಪಡೆಗಳ ಕಣ್ಗಾವಲಿನಲ್ಲಿರುವ ಸಣ್ಣ ಅಂತರವನ್ನು ಬಳಸಿಕೊಂಡು ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ವಿಶೇಷ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆ ದಕ್ಷಿಣ ಕಾಶ್ಮೀರವನ್ನು ಮಧ್ಯ ಕಾಶ್ಮೀರ ಹಾಗೂ ಪೀರ್ ಪಂಜಾಲ್ ಪರ್ವತ ಶ್ರೇಣಿಯೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವುದರಿಂದ ಭದ್ರತಾ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.
ಇತ್ತೀಚಿನ ದಿನಗಳಲ್ಲಿ ವಿದೇಶಿ ಉಗ್ರರನ್ನು ದಾಳಿಗಳಿಗೆ ಬಳಸುವ ಪ್ರವೃತ್ತಿ ಹೆಚ್ಚಾಗಿದ್ದರೂ, ಲತೀಫ್ ಮತ್ತು ಜಾಕಿರ್‌ರಂತಹ ಸ್ಥಳೀಯ ಉಗ್ರರನ್ನು ಬಂಧಿಸುವುದು ಅಥವಾ ಹೊಡೆದುರುಳಿಸುವುದು ಉಗ್ರರ ಲಾಜಿಸ್ಟಿಕ್ ಜಾಲವನ್ನು ದುರ್ಬಲಗೊಳಿಸಲು ಹಾಗೂ ಸ್ಥಳೀಯ ಯುವಕರ ನೇಮಕಾತಿಗೆ ತಡೆಹಾಕಲು ಅತ್ಯಂತ ಮಹತ್ವದ್ದಾಗಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.