ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸ್ಥಗಿತ; ಎಕ್ಸ್‌ಪ್ರೆಸ್‌ವೇ ಬಂದ್, ಸಾವಿರಾರು ಪ್ರಯಾಣಿಕರು ಪರದಾಟ..!

ಭೂಕುಸಿತದಿಂದ ಮಣ್ಣು, ಕಲ್ಲುಗಳು ಮತ್ತು ಮರಗಳು ಹಳಿಗಳ ಮೇಲೆ ಬಿದ್ದ ಪರಿಣಾಮ ಮುಂಬೈ ವಿಭಾಗದ ಅಪ್ ಲೈನ್, ಪುಣೆ ವಿಭಾಗದ ಡೌನ್ ಲೈನ್ ಹಾಗೂ ಮಧ್ಯದ ಲೈನ್ ಸೇರಿದಂತೆ ಮೂರು ಹಳಿಗಳಲ್ಲೂ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
Restoration work underway after debris and boulders partially cover a portion of the Pune to Mumbai carriageway of the Khopoli-Kusgaon Missing Link.
ಪುಣೆಯಿಂದ ಮುಂಬೈಗೆ ಹೋಗುವ ರಸ್ತೆ ಮಾರ್ಗವನ್ನು ಸರಿಪಡಿಸುತ್ತಿರುವ ಅಧಿಕಾರಿಗಳು.
Updated on

ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದ್ದು, ಸೋಮವಾರ ಮುಂಬೈ-ಪುಣೆ ನಡುವಿನ ರೈಲು ಹಾಗೂ ರಸ್ತೆ ಸಂಚಾರಕ್ಕೆ ಭಾರೀ ಹೊಡೆತ ಬಿದ್ದಿದೆ.

ನಿರಂತರ ಮಳೆಯಿಂದ ಭೋರ್ ಘಾಟ್ (ಖಂಡಾಲಾ ಘಾಟ್) ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಮುಂಬೈ-ಪುಣೆ ರೈಲು ಮಾರ್ಗದ ಮೂರು ಹಳಿಗಳ ಸಂಚಾರ ಸ್ಥಗಿತಗೊಂಡಿದೆ.

ಇದೇ ವೇಳೆ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ, ಹಳೆಯ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿ ಹಾಗೂ ಪರ್ಯಾಯ ರಸ್ತೆ ಮಾರ್ಗಗಳ ಮೇಲೂ ಮಳೆ ತೀವ್ರ ಪರಿಣಾಮ ಬೀರಿದ್ದು, ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅಗತ್ಯವಿಲ್ಲದಿದ್ದರೆ ಪುಣೆ ಮತ್ತು ಮುಂಬೈ ನಡುವೆ ಯಾವುದೇ ಪ್ರಯಾಣ ಮಾಡದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕೇಂದ್ರ ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಕರ್ಜತ್-ಲೋನಾವಾಲ ನಡುವಿನ ಭೋರ್ ಘಾಟ್ ವಿಭಾಗದಲ್ಲಿ ನಿರಂತರ ಮಳೆಯಿಂದ ಹಲವು ಕಡೆ ಭೂಕುಸಿತ ಸಂಭವಿಸಿದೆ. ಠಾಕುರ್ವಾಡಿ ಮತ್ತು ಮಂಕಿ ಹಿಲ್ ಲೂಪ್ ಕ್ಯಾಬಿನ್ ನಡುವಿನ ಅಪ್ ಲೈನ್‌ನಲ್ಲಿ ಮೊದಲ ಭೂಕುಸಿತ ಸಂಭವಿಸಿದ್ದು, ನಂತರ ಖಂಡಾಲಾ ಮತ್ತು ಮಂಕಿ ಹಿಲ್ ನಡುವಿನ ಮಧ್ಯದ ರೈಲು ಹಳಿಯ ಮೇಲೂ ಸೋಮವಾರ ಮುಂಜಾನೆ ಸುಮಾರು 3.05ರ ವೇಳೆಗೆ ಮತ್ತೊಂದು ಭೂಕುಸಿತ ಸಂಭವಿಸಿದೆ.

ಭೂಕುಸಿತದಿಂದ ಮಣ್ಣು, ಕಲ್ಲುಗಳು ಮತ್ತು ಮರಗಳು ಹಳಿಗಳ ಮೇಲೆ ಬಿದ್ದ ಪರಿಣಾಮ ಮುಂಬೈ ವಿಭಾಗದ ಅಪ್ ಲೈನ್, ಪುಣೆ ವಿಭಾಗದ ಡೌನ್ ಲೈನ್ ಹಾಗೂ ಮಧ್ಯದ ಲೈನ್ ಸೇರಿದಂತೆ ಮೂರು ಹಳಿಗಳಲ್ಲೂ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ರೈಲು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಸಿಎಸ್‌ಎಂಟಿ-ಪುಣೆ ಇಂದ್ರಾಯಣಿ ಎಕ್ಸ್‌ಪ್ರೆಸ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್, ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್‌ಪ್ರೆಸ್, ಧುಳೆ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.

ಇದಲ್ಲದೆ ಪುಣೆ-ಸಿಎಸ್‌ಎಂಟಿ ಸಿಂಹಗಢ ಎಕ್ಸ್‌ಪ್ರೆಸ್ ಸೇರಿದಂತೆ ಇನ್ನೂ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೂರ ಪ್ರಯಾಣದ ಅನೇಕ ರೈಲುಗಳ ಮಾರ್ಗ ಬದಲಾಯಿಸಲಾಗಿದ್ದು, ಕೆಲವು ರೈಲುಗಳನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ ಹಾಗೂ ಕೆಲವು ರೈಲುಗಳ ಹೊರಡುವ ಸಮಯವನ್ನು ಮರುನಿಗದಿಪಡಿಸಲಾಗಿದೆ.

Restoration work underway after debris and boulders partially cover a portion of the Pune to Mumbai carriageway of the Khopoli-Kusgaon Missing Link.
ಮುಂಬೈನಲ್ಲಿ ಮಳೆ ಅವಾಂತರ: ಮನ್ಖುರ್ದ್'ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; 6 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ..!

ಭೂಕುಸಿತದಿಂದ ಹಳಿಗಳ ಮೇಲೆ ಬಿದ್ದಿರುವ ಮಣ್ಣು, ಬಂಡೆಗಳು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ರೈಲ್ವೆ ಸಿಬ್ಬಂದಿ ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ. ನಿರಂತರ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದರೂ, ರೈಲು ಸಂಚಾರವನ್ನು ಆದಷ್ಟು ಬೇಗ ಪುನರಾರಂಭಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ತಮ್ಮ ರೈಲುಗಳ ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಎಸ್‌ಎಂಟಿ, ಠಾಣೆ, ಲೋಣಾವಳಾ ಹಾಗೂ ದಾದರ್ ರೈಲು ನಿಲ್ದಾಣಗಳಲ್ಲಿ ಸಹಾಯವಾಣಿ ಸಂಖ್ಯೆಗಳನ್ನೂ ಆರಂಭಿಸಲಾಗಿದೆ.

ಇನ್ನೊಂದೆಡೆ, ಧಾರಾಕಾರ ಮಳೆಯ ಹೊಡೆತಕ್ಕೆ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ಕೂಡ ತತ್ತರಿಸಿದೆ. ಎರಡೂ ದಿಕ್ಕಿನ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೆ ಈ ಮಾರ್ಗದಲ್ಲಿ ಪ್ರಯಾಣಿಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಮಾವಲ್ ಹಾಗೂ ತಾಮ್ಹಿಣಿ ಘಾಟ್ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರ್ಯಾಯ ರಸ್ತೆ ಮಾರ್ಗಗಳೂ ಜಲಾವೃತಗೊಂಡಿವೆ. ಎಕ್ಸ್‌ಪ್ರೆಸ್‌ವೇಯ ಕನೆಕ್ಟಿಂಗ್ ಲಿಂಕ್ ಮತ್ತು ಮಿಸ್ಸಿಂಗ್ ಲಿಂಕ್ ನಡುವಿನ ಭಾಗದಲ್ಲಿ ಕಾಂಕ್ರೀಟ್ ಕಂಬವೊಂದು ರಸ್ತೆಯ ಮೇಲೆ ಕುಸಿದ ಪರಿಣಾಮ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹಳೆಯ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲೂ ಹಲವು ಕಡೆ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಪಲೀಸರು ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಕೇವಲ ಎರಡು ತಿಂಗಳ ಹಿಂದಷ್ಟೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದ್ದ ಮುಂಬೈ-ಪುಣೆ ಮಿಸ್ಸಿಂಗ್ ಲಿಂಕ್ ಯೋಜನೆಯ ಮೇಲೂ ಮಳೆ ಪರಿಣಾಮ ಬಿದ್ದಿದೆ. ಸುಮಾರು 13 ಕಿಲೋಮೀಟರ್ ಉದ್ದದ ಈ ಬೈಪಾಸ್ ಮಾರ್ಗವು ಸಹ್ಯಾದ್ರಿ ಪರ್ವತ ಶ್ರೇಣಿಯ ಮೂಲಕ ನಿರ್ಮಿಸಲಾಗಿದ್ದು, ಮುಂಬೈ-ಪುಣೆ ನಡುವಿನ ಪ್ರಯಾಣದ ದೂರವನ್ನು ಸುಮಾರು 6 ಕಿಲೋಮೀಟರ್ ಕಡಿಮೆ ಮಾಡುವ ಜೊತೆಗೆ 25 ರಿಂದ 30 ನಿಮಿಷಗಳ ಪ್ರಯಾಣದ ಸಮಯ ಉಳಿಸುವ ಉದ್ದೇಶ ಹೊಂದಿತ್ತು. ಆದರೆ, ಭೂಕುಸಿತದ ಹಿನ್ನೆಲೆಯಲ್ಲಿ ಈ ಮಾರ್ಗವನ್ನೂ ಬಂದ್ ಮಾಡಲಾಗಿದೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ಬೆಳಗ್ಗೆ 4 ಗಂಟೆಯಿಂದಲೇ ಸಂಚಾರ ಮಾರ್ಗ ಬದಲಾವಣೆ ಜಾರಿಗೆ ತಂದಿದೆ. ಹೆದ್ದಾರಿ ಸಂಚಾರ ಪೊಲೀಸರು ಹಾಗೂ ಇತರ ತುರ್ತು ಸೇವಾ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ಪರಿಸ್ಥಿತಿಯನ್ನು ನಿಗಾ ವಹಿಸಿದ್ದಾರೆ. ವಾಹನ ಸವಾರರು ಅಗತ್ಯವಿಲ್ಲದಿದ್ದರೆ ಈ ಮಾರ್ಗದಲ್ಲಿ ಪ್ರಯಾಣಿಸದಂತೆ ಮನವಿ ಮಾಡಿದ್ದಾರೆ.

ಮುಂಬೈ ಕಡೆಗೆ ಪ್ರಯಾಣಿಸುತ್ತಿದ್ದ ಹಲವು ವಾಹನ ಸವಾರರು ಲೋಣಾವಳಾ ಹಾಗೂ ಖಂಡಾಲಾ ಘಾಟ್ ಭಾಗದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ.

ಮಿಸ್ಸಿಂಗ್ ಲಿಂಕ್ ಬಂದ್ ಆಗಿದ್ದರಿಂದ ಅನೇಕ ವಾಹನಗಳು ಲೋಣಾವಳಾ ನಗರದ ಮೂಲಕ ಹಳೆಯ ಮಾರ್ಗವನ್ನು ಬಳಸಲು ಪ್ರಯತ್ನಿಸಿದ್ದು, ಇದರಿಂದ ಭಾರೀ ಸಂಚಾರ ದಟ್ಟಣ ಉಂಟಾಗಿದೆ. ಕೆಲವರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ. ಭಾ

ರತೀಯ ಹವಾಮಾನ ಇಲಾಖೆ (IMD) ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

ತಗ್ಗು ಪ್ರದೇಶಗಳಲ್ಲಿ ಜಲಾವೃತ, ಭೂಕುಸಿತ ಹಾಗೂ ಸಂಚಾರ ವ್ಯತ್ಯಯ ಸಂಭವಿಸುವ ಸಾಧ್ಯತೆ ಇರುವುದರಿಂದ ಜನರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಹಾಗೂ ಸರ್ಕಾರ ಮತ್ತು ಸ್ಥಳೀಯ ಆಡಳಿತ ಹೊರಡಿಸುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com