ಶಿಷ್ಟಾಚಾರ ಬದಿಗಿಟ್ಟ ಇಂಡೋನೇಷ್ಯಾ ಅಧ್ಯಕ್ಷ: ವಿಮಾನ ನಿಲ್ದಾಣಕ್ಕೆ ಖುದ್ದು ಬಂದು ಪ್ರಧಾನಿ ಮೋದಿ ಬರಮಾಡಿಕೊಂಡ ಸುಬಿಯಾಂತೊ; ಜಕಾರ್ತಾದಲ್ಲಿ ಅದ್ಧೂರಿ ಸ್ವಾಗತ..!

ಪ್ರಧಾನಿ ಮೋದಿ ಇಂಡೋನೇಷ್ಯಾಗೆ ಆಗಮಿಸಿದ ಬಳಿಕ ಅಧ್ಯಕ್ಷ ಸುಬಿಯಾಂತೊ ಅವರು ಆತ್ಮೀಯವಾಗಿ ಸ್ವಾಗತಿಸಿ, ಉಭಯ ನಾಯಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
India's Prime Minister Narendra Modi, right, and Indonesia's President Prabowo Subianto
ಭಾರತದ ಪ್ರಧಾನಿ ಮೋದಿ ಮತ್ತು ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ
Updated on

ಜಕಾರ್ತಾ: ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಇಂಡೋನೇಷ್ಯಾಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅಪರೂಪದ ರಾಜತಾಂತ್ರಿಕ ಗೌರವ ಲಭಿಸಿದೆ.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರು ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡಿದ್ದು, ಬಳಿಕ ಜಕಾರ್ತಾದ ಅಧ್ಯಕ್ಷೀಯ ಭವನ ಇಸ್ತಾನಾ ಮೆರ್ಡೆಕಾದಲ್ಲಿ ಅವರಿಗೆ ಅದ್ಧೂರಿ ಔಪಚಾರಿಕ ಸ್ವಾಗತ ನೀಡಲಾಗಿದೆ.

ಪ್ರಧಾನಿ ಮೋದಿ ಇಂಡೋನೇಷ್ಯಾಗೆ ಆಗಮಿಸಿದ ಬಳಿಕ ಅಧ್ಯಕ್ಷ ಸುಬಿಯಾಂತೊ ಅವರು ಆತ್ಮೀಯವಾಗಿ ಸ್ವಾಗತಿಸಿ, ಉಭಯ ನಾಯಕರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಅಧ್ಯಕ್ಷೀಯ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದ ಪ್ರಧಾನಿ ಮೋದಿ, ಅತಿಥಿಗಳ ಪುಸ್ತಕಕ್ಕೆ ಸಹಿ ಹಾಕಿದರು.

ಬಳಿಕ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತ–ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು.

ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ, ಸಮುದ್ರ ಭದ್ರತೆ, ಸಂಪರ್ಕ ವೃದ್ಧಿ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಯೋಗ ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಪ್ರಾಮುಖ್ಯತೆ ಪಡೆದವು.

India's Prime Minister Narendra Modi, right, and Indonesia's President Prabowo Subianto
'ಪಶ್ಚಿಮ ಏಷ್ಯಾ ಸಂಘರ್ಷದಿಂದ LPG ಸಿಲಿಂಡರ್ ಬೆಲೆ 2 ಸಾವಿರ ರೂ.ಗೆ ಏರಿಕೆಯಾಗುತ್ತಿತ್ತು, ಅದನ್ನು ನಾವು ತಡೆದೆವು': ಪ್ರಧಾನಿ ಮೋದಿ-Video

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, "ಇಸ್ತಾನಾ ಮೆರ್ಡೆಕಾದಲ್ಲಿ ನೀಡಿದ ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಈ ಭೇಟಿ ಭಾರತ–ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿದ್ದು, ವಿವಿಧ ಆದ್ಯತೆಯ ಕ್ಷೇತ್ರಗಳಲ್ಲಿ ಹೊಸ ಸಹಕಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.

2025ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಭಾರತಕ್ಕೆ ಭೇಟಿ ನೀಡಿದ್ದ ಬಳಿಕ, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯ ಈ ದ್ವಿಪಕ್ಷೀಯ ಭೇಟಿ ಮಹತ್ವ ಪಡೆದುಕೊಂಡಿದೆ.

ಇಂಡೋನೇಷ್ಯಾ ಪ್ರವಾಸದ ಬಳಿಕ ಪ್ರಧಾನಿ ಮೋದಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೂ ಭೇಟಿ ನೀಡಲಿದ್ದು, ಭಾರತದ ಆ್ಯಕ್ಟ್ ಈಸ್ಟ್ ನೀತಿ, MAHASAGAR (Mutual and Holistic Advancement for Security Across the Regions) ದೃಷ್ಟಿಕೋನ ಹಾಗೂ ಮುಕ್ತ ಮತ್ತು ಸಮಗ್ರ ಇಂಡೋ-ಪೆಸಿಫಿಕ್ ಪ್ರದೇಶದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com