

ಕೊಲ್ಕೋತಾ: ಬಾರೂಯೀಪುರ್ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪ್ರಭಾಸ್ ಮಂಡಲ್ ಮಂಗಳವಾರ ರಾತ್ರಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಮಗನ ಕೃತ್ಯಕ್ಕೆ ಸ್ವತಃ ತಾಯಿಯೇ ಆಕ್ರೋಶ ಹೊರಹಾಕಿದ್ದು, ಆತನ ಮುಖ ನೋಡುವುದಿಲ್ಲ, ಶವ ತರಲು ತಾನು ಹೋಗುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಎನ್ ಕೌಂಟರ್ ಬಳಿಕ ಪ್ರತಿಕ್ರಿಯಿಸಿರುವ ಪ್ರಭಾಸ್ ತಾಯಿ ಸಂಧ್ಯಾ, ಆತ ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಮಗನ ಕೃತ್ಯವನ್ನು ಖಂಡಿಸಿದ್ದಾರೆ. ಒಬ್ಬ ತಾಯಿಯಾಗಿ ನನಗೆ ದುಃಖವಾಗುತ್ತಿದೆ ನಿಜ. ಆದರೆ ಅವನು ಮಾಡಿದ ಪಾಪದ ಕೃತ್ಯಕ್ಕೆ ಅವನಿಗೆ ತಕ್ಕ ಶಿಕ್ಷೆಯೇ ಸಿಕ್ಕಿದೆ. ಆ ಪುಟ್ಟ ಹುಡುಗಿಯನ್ನು ಅವನು ಎಷ್ಟು ಹಿಂಸಿಸಿದ್ದನೋ, ಹಾಗಾಗಿ ಅವನು ಸತ್ತಿದ್ದೇ ಒಳ್ಳೆಯದಾಯಿತು. ನಾನು ಅವನ ಶವವನ್ನು ಮನೆಗೆ ತರಲು ಹೋಗುವುದಿಲ್ಲ, ಅವನ ಮುಖ ನೋಡಲು ಸಹ ನನಗೆ ಇಷ್ಟವಿಲ್ಲ. ಆತನಿಗೆ ನೀಡಿರುವ ಶಿಕ್ಷೆ ಬಗ್ಗೆ ನನಗೆ ಯಾವುದೇ ಆಕ್ಷೇಪಣೆಯಿಲ್ಲ ಎಂದಿದ್ದಾರೆ.
ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಹಾಸಿಗೆ ಹಿಡಿದಿರುವ ಗಂಡನಿದ್ದ ಕಾರಣ, ತನ್ನ ಮಗನ ಸಾವಿನ ಬಗ್ಗೆ ತಿಳಿಸಲು ಇಬ್ಬರು ಪೊಲೀಸರು ಬಂದಾಗ ಆಸ್ಪತ್ರೆಗೆ ಹೋಗಲು ಸಹ ಅವರು ನಿರಾಕರಿಸಿದ್ದಾರೆ, ಮಂಗಳವಾರ ತಡರಾತ್ರಿ 12.45ರ ಸುಮಾರಿಗೆ ಬಾರೂಯಿಪುರದ ಸೂರ್ಯಪುರದಲ್ಲಿ ಘಟನೆ ನಡೆದಿದೆ. ಆರೋಪಿ ಪ್ರಭಾಸ್ ಮಂಡಲ್ನನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು. ಸಾರ್ವಜನಿಕರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಪೊಲೀಸರು ತಡರಾತ್ರಿ ಈ ಕಾರ್ಯಾಚರಣೆ ನಡೆಸಿದ್ದರು.
ಆದರೆ, ಕತ್ತಲೆಯ ಲಾಭ ಪಡೆಯಲು ಯತ್ನಿಸಿದ ಪ್ರಭಾಸ್, ದಿಢೀರನೆ ಪೊಲೀಸರ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ ಪೊಲೀಸರ ಮೇಲೆಯೇ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಪ್ರಭಾಸ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಅಪ್ರಾಪ್ತ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ, ನಂತರ ಅವಳನ್ನು ಜೀವಂತವಾಗಿ ಚೀಲದಲ್ಲಿ ತುಂಬಿಸಿ ಕೆರೆಗೆ ಎಸೆದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸ್ಥಳೀಯರು ಮೊಂಡಲ್ ನನ್ನು ಗುರುತಿಸಿ ಪೊಲೀಸರಿಗೆ ಒಪ್ಪಿಸಿದ ನಂತರ ಭಾನುವಾರ ಬಾಲಕಿಯ ಶವವನ್ನು ಕೆರೆಯಿಂದ ಹೊರತೆಗೆಯಲಾಯಿತು. ಆನಂದ ಸರ್ದಾರ್ ಮತ್ತು ದಿಬಾಕರ್ ಸರ್ದಾರ್ ಎಂಬ ಇನ್ನಿಬ್ಬರನ್ನು ಸಹ ಬಂಧಿಸಲಾಗಿದ್ದು. ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.