

ನಾಸಿಕ್: ಟಿಸಿಎಸ್ ಲೈಂಗಿಕ ಕಿರುಕುಳ ಹಾಗೂ ಬಲವಂತದ ಮತಾಂತರ ಆರೋಪ ಪ್ರಕರಣದಲ್ಲಿ ಆರೋಪಿ ಹಾಗೂ ಗರ್ಭಿಣಿ ನಿದಾ ಖಾನ್‌ಗೆ ಸ್ಥಳೀಯ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹೌದು.. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಂಸ್ಥೆಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಹಾಗೂ ಆರೋಪಿತ ಧರ್ಮಾಂತರ ಪ್ರಕರಣದಲ್ಲಿ ಆರೋಪಿ ನಿದಾ ಖಾನ್ ಅವರಿಗೆ ನಾಸಿಕ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯ ನಿದಾ ಖಾನ್ ಅವರಿಗೆ 75,000 ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಒಬ್ಬ ಶ್ಯೂರಿಟಿ ಷರತ್ತಿನೊಂದಿಗೆ ಜಾಮೀನು ನೀಡಿತು.
ಆರೋಪಿ ಗರ್ಭಿಣಿ ಎಂಬ ಕಾರಣ ನೀಡಿ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಜೈಲಿನಲ್ಲಿ ಹೆರಿಗೆ ಯಾವುದೇ ಮಹಿಳೆಗೆ ಅಸಹನೀಯ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಭಗವಾನ್ ಶ್ರೀಕೃಷ್ಣ ಹೆಸರು ಉಲ್ಲೇಖ
ಇದೇ ವೇಳೆ ಕೋರ್ಟ್ ಭಗವಾನ್ ಶ್ರೀಕೃಷ್ಣನ ಜನನದ ಸಂದರ್ಭವನ್ನು ಉಲ್ಲೇಖಿಸಿ ನ್ಯಾಯಾಲಯ ಹೋಲಿಕೆ ಮಾಡಿದ್ದು, "ಭಗವಾನ್ ಶ್ರೀಕೃಷ್ಣನ ಜನನದ ಸಂದರ್ಭದಂತೆ ಜೈಲಿನಲ್ಲಿ ಮಗುವಿಗೆ ಜನ್ಮ ನೀಡಬೇಕಾಗುವ ನೋವು ಹಾಗೂ ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಯಾವುದೇ ಮಹಿಳೆ ಸಹಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
"ಇಂತಹ ವೇದನಾಮಯ ಪರಿಸ್ಥಿತಿಯನ್ನು ತಪ್ಪಿಸಲು ಹಾಗೂ ಜನಿಸಲಿರುವ ಮಗುವಿನ ಸುರಕ್ಷಿತ ಸ್ವಾಗತ ಮತ್ತು ಸಮಗ್ರ ಹಿತದೃಷ್ಟಿಯಿಂದ ಆರೋಪಿಗೆ ನ್ಯಾಯಾಂಗ ವಿವೇಚನೆಯ ಆಧಾರದ ಮೇಲೆ ಜಾಮೀನು ನೀಡುವುದು ನ್ಯಾಯೋಚಿತ," ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಜಿ. ಜೋಶಿ ತಮ್ಮ ಆದೇಶದಲ್ಲಿ, ತನಿಖೆಯ ಒಟ್ಟಾರೆ ವರದಿಯ ಪ್ರಕಾರ ನಿದಾ ಖಾನ್ ಸಹ-ಆರೋಪಿಗಳ ನೆರವಿನಿಂದ ಸಂತ್ರಸ್ತರ ಬ್ರೇನ್‌ವಾಶ್ ಗೆ ಪ್ರಯತ್ನಿಸಿದ್ದಾಳೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಸಂತ್ರಸ್ತೆಯ ವೈಚಾರಿಕ ನಿಲುವು ಹಾಗೂ ಧರ್ಮವನ್ನು ಬದಲಾಯಿಸಲು ಯತ್ನಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಲೈಂಗಿಕ ಕಿರುಕುಳ ಹಾಗೂ ಆರೋಪಿತ ಧರ್ಮಾಂತರ ಪ್ರಕರಣದ ತನಿಖೆಯನ್ನು ಉಲ್ಲೇಖಿಸಿರುವ ನ್ಯಾಯಾಲಯ, "ಹಿಂದೂ ಧರ್ಮದಲ್ಲಿ ಆಕ್ಷೇಪಾರ್ಹ ಕಥೆಗಳಿವೆ" ಎಂದು ಸಂತ್ರಸ್ತರಿಗೆ ಮನವರಿಕೆ ಮಾಡಲು ಪ್ರಯತ್ನಿಸಲಾಗಿತ್ತು ಎಂದು ಆದೇಶದಲ್ಲಿ ದಾಖಲಿಸಿದೆ.
ಜಾಮೀನು ನೀಡಲು ನ್ಯಾಯಾಲಯ ನೀಡಿದ ಕಾರಣಗಳು
ಸುಮಾರು ಎರಡು ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ನಿದಾ ಖಾನ್ ಅವರಿಗೆ ಮೇ 7ರಂದು ನ್ಯಾಯಾಲಯ ಜಾಮೀನು ನೀಡಿತ್ತು. ಈ ಕುರಿತು ಕಾರಣಸಹಿತ ಆದೇಶ ಜುಲೈ 9, ಗುರುವಾರ ಸಾರ್ವಜನಿಕವಾಗಿ ಲಭ್ಯವಾಯಿತು. ಪ್ರಕರಣದ ಎಫ್‌ಐಆರ್‌ನಲ್ಲಿ ನಿದಾ ಖಾನ್ ಅವರ ಪಾತ್ರವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ನಿದಾ ಖಾನ್ ಐದು ತಿಂಗಳ ಗರ್ಭಿಣಿಯಾಗಿದ್ದಾರೆ ಎಂಬ ಅವರ ಪರ ವಕೀಲರ ವಾದವನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಿದೆ. ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆಯಾಗಿರುವುದರಿಂದ ಗರ್ಭಿಣಿ ಆರೋಪಿಯನ್ನು ಮತ್ತಷ್ಟು ನ್ಯಾಯಾಂಗ ಬಂಧನದಲ್ಲಿಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಸಿಕ್ಯೂಷನ್ ವಾದ ಮತ್ತು ಆರೋಪ
ಗರ್ಭಧಾರಣೆಯ ಜೊತೆಗೆ ನಿದಾ ಖಾನ್ ನಿರಪರಾಧಿಯಾಗಿದ್ದು, ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಅವರ ಪರ ವಕೀಲ ರಾಹುಲ್ ಕಸ್ಲಿವಾಲ್ ವಾದಿಸಿದರು. ನಿದಾ ಖಾನ್ ಉನ್ನತ ಶಿಕ್ಷಣ ಪಡೆದವರಾಗಿದ್ದು, 2026ರ ಏಪ್ರಿಲ್‌ವರೆಗೆ ಟಿಸಿಎಸ್‌ನಲ್ಲಿ 'ಅಸೋಸಿಯೇಟ್' ಆಗಿ ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದರು.
ಸಾರ್ವಜನಿಕ ಅಭಿಯೋಜಕ ವಿಜಯ್ ಗಾಯಕ್ವಾಡ್ ಹಾಗೂ ಸಂತ್ರಸ್ತೆಯ ಪರ ವಕೀಲರಾದ ಮಿಲಿಂದ್ ಕುರ್ಕುಟೆ ಮತ್ತು ನಿತಿನ್ ಪಂಡಿತ್ ಅವರು ನಿದಾ ಖಾನ್ ಹಾಗೂ ಸಹ-ಆರೋಪಿ ದಾನಿಶ್ ಶೇಖ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದರು. ತನಿಖೆಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಧಾರ್ಮಿಕ ಒತ್ತಡದ ಸಾಕಷ್ಟು ಪುರಾವೆಗಳು ಪತ್ತೆಯಾಗಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ದಾನಿಶ್ ಶೇಖ್ ಧರ್ಮಾಂತರ ಉದ್ದೇಶದಿಂದ ಸಂತ್ರಸ್ತೆಗೆ ಇಸ್ಲಾಂ ಧರ್ಮದ ಪುಸ್ತಕ ಹಾಗೂ ಬುರ್ಖಾ ನೀಡಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿತು.
ಸಂತ್ರಸ್ತೆಯನ್ನು ಉದ್ದೇಶಪೂರ್ವಕವಾಗಿ ಲೈಂಗಿಕವಾಗಿ ಶೋಷಿಸಿ, ಆಕೆಯನ್ನು ಧರ್ಮಾಂತರಗೊಳಿಸಲು ಪ್ರಯತ್ನಿಸಲಾಗಿದೆ ಎಂಬುದನ್ನು ಈ ಸಂಗತಿಗಳು ಸೂಚಿಸುತ್ತವೆ ಎಂದು ಪ್ರಾಸಿಕ್ಯೂಷನ್ ತಿಳಿಸಿತು.
ವ್ಯಾಪಕ ತನಿಖೆ ಮತ್ತು ನಿದಾ ಖಾನ್ ಅವರ ಪಾತ್ರ
ನಾಸಿಕ್ ಪೊಲೀಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ಟಿಸಿಎಸ್ ಘಟಕದ ಮಹಿಳಾ ಉದ್ಯೋಗಿಗಳ ಶೋಷಣೆ, ಬಲವಂತದ ಧರ್ಮಾಂತರ ಪ್ರಯತ್ನ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಕಿರುಕುಳಕ್ಕೆ ಸಂಬಂಧಿಸಿದ ಒಟ್ಟು ಒಂಬತ್ತು ಪ್ರಕರಣಗಳ ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ದಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 69 (ವಂಚನೆಯ ಮೂಲಕ ಲೈಂಗಿಕ ಸಂಪರ್ಕ), ಸೆಕ್ಷನ್ 65 (ಲೈಂಗಿಕ ಕಿರುಕುಳ) ಹಾಗೂ ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಧಿಗಳನ್ನೂ ಆರೋಪಿಗಳ ವಿರುದ್ಧ ಅನ್ವಯಿಸಲಾಗಿದೆ. ತನಿಖೆಯ ಪ್ರಕಾರ, ನಿದಾ ಖಾನ್ ಸಂತ್ರಸ್ತೆಗೆ ಬುರ್ಖಾ ಹಾಗೂ ಧಾರ್ಮಿಕ ಸಾಹಿತ್ಯ ನೀಡಿ ಆಕೆಯ ಬ್ರೈನ್ ವಾಶ್ ಗೆ ಪ್ರಯತ್ನಿಸಿದ್ದಾಳೆ ಎಂಬ ಆರೋಪವಿದೆ.
ಸಂತ್ರಸ್ತೆಯ ಮೊಬೈಲ್‌ನಲ್ಲಿ ಇಸ್ಲಾಂ ಸಂಬಂಧಿತ ಅಪ್ಲಿಕೇಶನ್‌ಗಳನ್ನು ಅಳವಡಿಸುವುದು, ಆಕೆಯ ಮನೆಗೆ ತೆರಳಿ ನಮಾಜ್ ಮಾಡುವ ವಿಧಾನವನ್ನು ಕಲಿಸುವುದು ಹಾಗೂ ಹಿಜಾಬ್ ಧರಿಸುವುದನ್ನು ತೋರಿಸುವುದು ಸೇರಿದಂತೆ ಹಲವು ಆರೋಪಗಳು ನಿದಾ ಖಾನ್ ವಿರುದ್ಧ ದಾಖಲಾಗಿವೆ.
ಟಿಸಿಎಸ್‌ನ ಪ್ರತಿಕ್ರಿಯೆ
ಪ್ರಕರಣಗಳು ಬೆಳಕಿಗೆ ಬಂದ ಬಳಿಕ, ಯಾವುದೇ ರೀತಿಯ ಕಿರುಕುಳ ಅಥವಾ ಬಲವಂತದ ವರ್ತನೆಗೆ ತನ್ನ ಸಂಸ್ಥೆಯಲ್ಲಿ ಶೂನ್ಯ ಸಹಿಷ್ಣುತೆ (Zero Tolerance) ನೀತಿ ಹಲವು ವರ್ಷಗಳಿಂದ ಜಾರಿಯಲ್ಲಿದೆ ಎಂದು ಟಿಸಿಎಸ್ ಸ್ಪಷ್ಟಪಡಿಸಿದೆ. ನಾಸಿಕ್ ಕಚೇರಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.